ಕ್ರಿಕೆಟ್ ಆಡಳಿತಾಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಮುಂದೆ ‘ಫಿಕ್ಸಿಂಗ್’ ಏನೂ ಅಲ್ಲ: ಮಾಜಿ ಐಪಿಎಸ್ ಅಧಿಕಾರಿ ಕುಮಾರ್

ಹೊಸದಿಲ್ಲಿ, ಫೆ.19: ಕ್ರಿಕೆಟ್‌ನಲ್ಲಿನ ಭ್ರಷ್ಟಾಚಾರದಲ್ಲಿ ‘ಫಿಕ್ಸಿಂಗ್’ ಪ್ರಕರಣ ಎನ್ನುವುದು ಒಂದು ತುಣುಕಷ್ಟೇ ಎಂಬ ಅಂಶ ನನ್ನ ಅಧಿಕಾರದ ಅವಧಿಯಲ್ಲಿ ಮನವರಿಕೆಯಾಗಿದೆ. ವಾಸ್ತವವಾಗಿ ಕ್ರಿಕೆಟ್ ಆಡಳಿತಾಧಿಕಾರಿಗಳು ಒಳಗೊಂಡಿರುವ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹೋಲಿಸಿದರೆ ಇದು ಕಡಿಮೆ ಪ್ರಮಾಣದಲ್ಲಿದೆ ಎಂದು 2015ರಲ್ಲಿ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ(ಎಸಿಯು)ಮುಖ್ಯಸ್ಥರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ನೀರಜ್ ಕುಮಾರ್ ತಾವು ಬರೆದಿರುವ ‘ಎ ಕಾಪ್ ಇನ್ ಕ್ರಿಕೆಟ್’ ಹೆಸರಿನ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ.
ನಮ್ಮ ದೇಶದಲ್ಲಿ ಕ್ರಿಕೆಟ್ ಹೆಸರಿನಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳ ಅವಲೋಕನವನ್ನು ಓದುಗರಿಗೆ ನೀಡಲು ಪ್ರಯತ್ನಿಸಿದ್ದೇನೆ ಎಂದು ಕುಮಾರ್ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.
ಭಾರತದಲ್ಲಿ ಐಪಿಎಲ್ ಮೂಲಕ ಉತ್ತಮ ಆದಾಯ ಗಳಿಸಲಾಗುತ್ತಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಹಣ ಹೆಚ್ಚಾಗಿ ದುರುಪಯೋಗವಾಗುತ್ತಿದೆ. 2015ರಲ್ಲಿ ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆಯ(ಜೆಕೆಸಿಎ) ಪ್ರಮುಖ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಾಗಿತ್ತು. ಬಿಸಿಸಿಐ ನೀಡಿರುವ ಕೋಟ್ಯಂತರ ರೂಪಾಯಿಯನ್ನು ಜೆಕೆಸಿಎ ದುರುಪಯೋಗಪಡಿಸಿಕೊಂಡಿರುವುದು ಒಂದು ಉದಾಹರಣೆಯಾಗಿದೆ ಎಂದು ಕುಮಾರ್ ಹೇಳಿದ್ದಾರೆ.
ರಣಜಿ ಇಲ್ಲವೇ ಐಪಿಎಲ್ ತಂಡದಲ್ಲಿ ಸ್ಥಾನ ನೀಡುವುದಾಗಿ ಭರವಸೆ ನೀಡಿದ ಕೋಚ್‌ಗಳು ಹಾಗೂ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಪಡೆದು ವಂಚನೆ ಮಾಡಿ ಪರಾರಿಯಾಗಿದ್ದಾರೆಂಬ ಬಗ್ಗೆ ನನಗೆ ಹಲವಾರು ಆಟಗಾರರು ಹಾಗೂ ಅವರ ಪೋಷಕರು ದೂರು ನೀಡಿದ್ದಾರೆಂದು ಕುಮಾರ್ ಪುಸ್ತಕದಲ್ಲಿ ಬರೆದಿದ್ದಾರೆ.