ದ.ಕ.ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ‘ಜನಸಾಮಾನ್ಯರೊಂದಿಗೆ ಪೊಲೀಸ್’ ಕಾರ್ಯಕ್ರಮ

ಮಂಗಳೂರು: ನೂತನ ಎಸ್ಪಿ ಡಾ. ಅಮಟೆ ವಿಕ್ರಂ ಮಾರ್ಗದರ್ಶನದಲ್ಲಿ ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿ ರವಿವಾರ ‘ಜನಸಾಮಾನ್ಯರೊಂದಿಗೆ ಪೊಲೀಸ್’ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಗಮನ ಸೆಳೆಯುವ ಪ್ರಯತ್ನ ನಡೆದಿದೆ.
ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ರವಿವಾರ ಸಂತ್ರಸ್ತರ ದಿನ, ಬ್ರೀಫಿಂಗ್ ಸಭೆ, ಎಸ್ಸಿ-ಎಸ್ಟಿ ಅಹವಾಲು ಆಲಿಕೆ ಸಭೆಗಳನ್ನು ಆಯೋಜಿಸಲಾಯಿತು.
ಸಂತ್ರಸ್ಥರ ಪ್ರಯುಕ್ತ ಸಂತ್ರಸ್ತರ ಸಭೆಗಳನ್ನು ಠಾಣಾಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಯಿತು. ಆಯಾ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಸಂತ್ರಸ್ತರನ್ನು ಕರೆಸಿ ಅವರ ಪ್ರಕರಣದ ಪ್ರಸ್ತುತ ಹಂತದ ಮಾಹಿತಿ ನೀಡಲಾಯಿತು. ಅಲ್ಲದೆ ಪ್ರಕರಣಗಳ ತನಿಖೆ/ ವಿಚಾರಣೆಗೆ ಪೂರಕವಾದ ಮಾಹಿತಿಗಳನ್ನು ಪಡೆಯಲು, ಪ್ರಕರಣದ ಆರೋಪಿಗಳಿಂದ ಯಾವುದೇ ಬೆದರಿಕೆ ಅಥವಾ ಆಮಿಷಗಳನ್ನು ಒಡ್ಡುತ್ತಿದ್ದಲ್ಲಿ ಮಾಹಿತಿ ಪಡೆದು ಸೂಕ್ತ ಕಾನೂನುಕ್ರಮ ಕೈಗೊಂಡು ಸಂತ್ರಸ್ಥರಲ್ಲಿ ಭದ್ರತೆಯ ಭಾವನೆ ಮೂಡಿಸಲಾಯಿತು. ಅಲ್ಲದೆ ಸಂತ್ರಸ್ಥರಿಗೆ ಕಾನೂನು ಪ್ರಕಾರ ಸರಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳ ಮಾಹಿತಿ ನೀಡಲಾಯಿತು.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಸೂಕ್ಷ್ಮ್ಮ/ಪ್ರಮುಖ ಸ್ಥಳಗಳಲ್ಲಿಯೇ ಪೊಲೀಸ್ ಸಿಬ್ಬಂದಿ ವರ್ಗದ ಸಾಮಾನ್ಯ ಬ್ರೀಫಿಂಗ್ ಸಭೆ ನಡೆಸುವ ಹೊಸ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅದರಂತೆ ರವಿವಾರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಕ್ಷ್ಮ/ಪ್ರಮುಖ ಸ್ಥಳಗಳಲ್ಲಿ ಸಂಬಂಧಪಟ್ಟ ಡಿವೈಎಸ್ಪಿ,ಪಿಐ/ಸಿಪಿಐ,ಎಸ್ಸೈ ನೇತೃತ್ವದಲ್ಲಿ ಬ್ರೀಫಿಂಗ್ ಸಭೆ ನಡೆಸಲಾಯಿತು.
ಜಿಲ್ಲೆಯ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವ ದೃಷ್ಟಿಯಿಂದ ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಯನ್ನು ಬಲಪಡಿಸುವ ಉದ್ದೇಶದಿಂದ ಇಂತಹ ಸಭೆಗಳನ್ನು ಕಡ್ಡಾಯವಾಗಿ ಪ್ರತಿ ರವಿವಾರ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಸಲಾಗುವುದು ಎಂದು ಎಸ್ಪಿ ಡಾ. ಅಮಟೆ ವಿಕ್ರಂ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ಗಳ ವ್ಯಾಪ್ತಿಯಲ್ಲಿ ರವಿವಾರ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜನರ ಸಭೆಗಳನ್ನು ಎಸ್ಸೈ, ಪಿಐ/ಸಿಪಿಐ, ಎಸ್ಸೈ ನೇತೃತ್ವದಲ್ಲಿ ನಡೆಸಿ ಅವರ ಕುಂದುಕೊರತೆಗಳನ್ನು ವಿಚಾರಿಸಲಾ ಯಿತು. ಅಲ್ಲದೆ ಕಾನೂನಿನ ಬಗ್ಗೆ, ಸರಕಾರದ ಸವಲತ್ತು ಯೋಜನೆಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಅವಶ್ಯಕ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.