ರಾಜಕೀಯ ಲಾಭಕ್ಕಾಗಿ ಬಿಜೆಪಿಯಿಂದ ಧರ್ಮಗಳ ಮಧ್ಯೆ ಕಲಹ ಸೃಷ್ಟಿ: ಬಿ.ಕೆ.ಹರಿಪ್ರಸಾದ್

ಬೈಂದೂರು: ಬಿಜೆಪಿಯವರು ಕಳೆದ ಚುನಾವಣೆಯಲ್ಲಿ ಸುಳ್ಳು ಪ್ರಚಾರದ ಮೂಲಕ ಜನರ ಭಾವನೆಗಳಿಗೆ ತಪ್ಪು ಸಂದೇಶ ನೀಡಿ ಅಧಿಕಾರ ಪಡೆದಿದ್ದಾರೆ. ಬಂಡವಾಳ ಶಾಹಿಗಳನ್ನು ಪ್ರೋತ್ಸಾಹಿಸುತ್ತಿರುವ ಬಿಜೆಪಿ, ಜನ ಸಾಮಾನ್ಯರಿಗೆ ನೀಡಿದ ಕೊಡುಗೆ ಶೂನ್ಯ. ಲವ್ ಜಿಹಾದ್, ಜಾತಿ-ಧರ್ಮಗಳ ನಡುವೆ ಕಲಹ ಸೃಷ್ಟಿಸಿ ರಾಜಕೀಯ ಲಾಭ ಪಡೆಯುವುದು ಬಿಜೆಪಿಗರ ಹುಟ್ಟು ಗುಣವಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.
ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬೈಂದೂರಿನ ಯಡ್ತರೆ ಬೈಪಾಸ್ ಬಳಿ ರವಿವಾರ ನಡೆದ ಕಾಂಗ್ರೆಸ್ ಕರಾವಳಿ ಪ್ರಜಾ ಧ್ವನಿ ಯಾತ್ರೆಯ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು. ಈ ಹಿಂದೆ ಬೆಲೆ ಏರಿಕೆ ಕುರಿತು ಮಾತನಾಡುತ್ತಿದ್ದ ಪ್ರಧಾನಿ ಮೋದಿ ಈಗ ಮೌನಿ ಯಾಗಿದ್ದಾರೆ. ಭ್ರಷ್ಟಾಚಾರವೇ ಬಿಜೆಪಿ ಆಡಳಿತದ ಸಾಧನೆಯಾಗಿದೆ ಎಂದು ಅವರು ಟೀಕಿಸಿದರು.
ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಬೈಂದೂರಿನ ಹಾಲಿ ಶಾಸಕರು ಕಳೆದ ವಿಧಾನಸಭಾ ಚುನಾವಣೆ ವೇಳೆ ವಿಮಾನ ನಿಲ್ದಾಣ ನಿರ್ಮಾಣ, ಐದು ನದಿಗಳ ಜೋಡಣೆ, ಗೋಳಿಹೊಳೆಯಲ್ಲಿ ಮೆಡಿಕಲ್ ಕಾಲೇಜ್, 100 ಹಾಸಿಗೆಯ ಆಸ್ಪತ್ರೆ ನಿರ್ಮಾಣ ಎಂದು ಸುಳ್ಳು ಆಶ್ವಾಸನೆ ನೀಡಿದ್ದಾರೆ. ಐದು ವರ್ಷ ಕಳೆದರೂ ಕೂಡ ಬೈಂದೂರಿನಲ್ಲಿ ಕಮಿಷನ್ ದಂಧೆ ಬಿಟ್ಟರೆ ಬೇರೆ ಏನು ಕಾಣಿಸುತ್ತಿಲ್ಲ. ಕೃಷಿಕರು, ಮೀನುಗಾರ ರನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಎಸ್.ರಾಜು ಪೂಜಾರಿ, ರಘುರಾಮ ಶೆಟ್ಟಿ, ದಿನೇಶ ಪುತ್ರನ್, ಗೌರಿ ದೇವಾಡಿಗ, ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ, ಪ್ರಮುಖರಾದ ರಮೇಶ ಗಾಣಿಗ, ವಿಕಾಸ್ ಹೆಗ್ಡೆ, ಸಂಪಿಗೇಡಿ ಸಂಜೀವ ಶೆಟ್ಟಿ, ವಾಸುದೇವ ಯಡಿಯಾಳ್ ಉಪಸ್ಥಿತರಿದ್ದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಕೊಡವೂರು ಸ್ವಾಗತಿಸಿದರು. ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಬೈಂದೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗರಾಜ ಗಾಣಿಗ ವಂದಿಸಿದರು.