ಕುಮಟ: ಉಳ್ಳೂರು ಮಠದಲ್ಲಿ 11ನೇ ಶತಮಾನದ ಅಪೂರ್ವ ಶಿಲ್ಪ ಪತ್ತೆ
ಕಲ್ಯಾಣ ಚಾಲುಕ್ಯ ಶೈಲಿಯ ಜನಾರ್ದನ ಶಿಲ್ಪ

ಉಡುಪಿ, ಫೆ.19: ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಉಳ್ಳೂರು ಮಠದಲ್ಲಿ 11ನೇ ಶತಮಾನದ ಅಪೂರ್ವ ಶಿಲ್ಪ, ಶಾಸನ ಮತ್ತು ಇತರೆ ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ ಎಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.
ಉಳ್ಳೂರು ಮಠ ಎಂದು ಕರೆಯಲ್ಪಡುವ ಜಾಗದಲ್ಲಿ ಈಗ ಗಣಪತಿ ದೇವಾಲಯವಿದ್ದು, ದೇವಾಲಯದ ಪಕ್ಕದಲ್ಲಿ ಭಗ್ನಗೊಂಡ ಶಿಲ್ಪದ ಅವಶೇಷಗಳು, ದೇವಾಲಯದ ಅವಶೇಷಗಳು ಮತ್ತು ಒಂದು ಶಾಸನ ಕಂಡು ಬರುತ್ತದೆ. ಭಗ್ನಗೊಂಡ ಶಿಲ್ಪವೊಂದನ್ನು ಸ್ಥಳೀಯವಾಗಿ ಮಹಾವಿಷ್ಣು ಎಂದು ಕರೆಯಲಾಗುತ್ತದೆ. ಆದರೆ, ಶಿಲ್ಪಶಾಸ್ತ್ರದ ಪ್ರಕಾರ ಇದು ಜನಾರ್ದನನ ಶಿಲ್ಪವಾಗಿದೆ.
ಸಮಭಂಗಿಯಲ್ಲಿ ಪದ್ಮಪೀಠದ ಮೇಲೆ ನಿಂತಿರುವ ಶಿಲ್ಪವು, ತನ್ನ ಮುಂದಿನ ಬಲಗೈಯಲ್ಲಿ ಪಿಂಡ, ಎಡಗೈಯಲ್ಲಿ ಗಧೆ, ಹಿಂದಿನ ಎಡಗೈಯಲ್ಲಿ ಶಂಖ ಮತ್ತು ಬಲಗೈಯಲ್ಲಿ ಚಕ್ರವನ್ನು ಹಿಡಿದಂತೆ ಕೆತ್ತಲಾಗಿದೆ. ತಲೆಯ ಮೇಲೆ ಉದ್ದನೆಯ ಕರಂಡ ಮುಕುಟವಿದೆ. ತಲೆಯ ಹಿಂಭಾಗದಲ್ಲಿ ಆಕರ್ಷಕವಾದ ಪ್ರಭಾವಳಿಯ ಪಟ್ಟಿಕೆಯಿದೆ. ಆ ಪಟ್ಟಿಕೆಯ ಅಂಚಿನಲ್ಲಿ ಜ್ವಾಲೆಯ ಚಿತ್ರಣ ವಿದೆ.
ಶಿಲ್ಪದ ತಲೆಯ ಎಡ-ಬಲಗಳಲ್ಲಿ ಇಳಿಬಿದ್ದ ಸುರುಳಿಯಾಕಾರದ ಕೇಶರಾಶಿಯ ರಚನೆ ಶಿಲ್ಪ ಸೌಂದರ್ಯದ ಉತ್ತುಂಗತೆಗೆ ಸಾಕ್ಷಿಯಾಗಿದೆ. ಕಿವಿಗಳಲ್ಲಿ ಮಕರಕುಂಡಲಗಳಿವೆ. ನೀಳಮೂಗು, ಮಂದಸ್ಮಿತ ತುಟಿ, ಅಂದವಾದ ಕಣ್ಣುಗಳು, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಕೊರಳಲ್ಲಿ ಕಂಠಾಭರಣ, ಕೊರಳಹಾರ, ಕೇಯೂರ, ಕೌಸ್ತುಭಹಾರ, ಭುಜಕೀರ್ತಿ, ತೋಳಬಂಧಿ ಮತ್ತು ಕಂಕಣಗಳಿಂದ ಆಲಂಕೃತವಾಗಿದೆ. ಸೊಂಟದ ಕೆಳಗೆ ವಸ್ತ್ರ ವಿದೆ. ನಡುಪಟ್ಟಿಯಲ್ಲಿ ಸಿಂಹಕೀರ್ತಿಯಿದೆ. ಶಿಲ್ಪವನ್ನು ಮೃದುವಾದ ಬಳಪದ ಕಲ್ಲಿನಲ್ಲಿ ಮಾಡಲಾಗಿದೆ. ದಕ್ಷಿಣ ಭಾರತದ ಅಪೂರ್ವ ಶಿಲ್ಪಗಳಲ್ಲಿ ಒಂದು, ಕಲ್ಯಾಣ ಚಾಲುಕ್ಯ ಶೈಲಿಯಲ್ಲಿದೆ.
ಭಾಗವತ ಪಂಥವು ಉತ್ತರ ಭಾರತದ ಪಶ್ಚಿಮ ಕರಾವಳಿಯಲ್ಲಿ ಆರಂಭವಾಗಿ ಕ್ರಿ.ಶ. 5ನೇ ಶತಮಾನದ ಹೊತ್ತಿಗೆ ಕರ್ನಾಟಕದಲ್ಲಿ ಪಸರಿಸಿತು. ಕರ್ನಾಟಕ ಕರಾವಳಿಯ ಗೋಕರ್ಣ ಮತ್ತು ಐಗುಂದಗಳಲ್ಲಿ ಕ್ರಿ.ಶ.7ನೇ ಶತಮಾನದ ಮಹಾವಿಷ್ಣುವಿನ ಶಿಲ್ಪಗಳು ಕಂಡುಬಂದಿವೆ.
ಗಣಪತಿ ದೇವಾಲಯದ ಹಿಂಭಾಗದಲ್ಲಿ ಒಂದು ಶಾಸನದ ಶಿಲಾಫಲಕ ವಿದ್ದು, ಶಾಸನವನ್ನು ಕನ್ನಡ ಮತ್ತು ತಿಗಳಾರಿ ಲಿಪಿ ಮತ್ತು ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ. 14ನೇ ಶತಮಾನದ ಶಾಸನದಲ್ಲಿ ಕಾಮದೇವರಸ ಮತ್ತು ಬಸವಯ್ಯ ಎಂಬವರ ಉಲ್ಲೇಖವಿದ್ದು, ಅವರು ಈಗಿನ ಹೊನ್ನಾವರ ತಾಲೂಕಿನ ಚಂದಾವರದ ಅಡಳಿತಾಧಿಕಾರಿಗಳಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಚಂದಾವರ, ದಕ್ಷಿಣ ಕನ್ನಡ ಜಿಲ್ಲೆಯ ಆಳುಪರ ಒಂದು ಉಪರಾಜಧಾನಿಯಾಗಿತ್ತು. ಶಾಸನವನ್ನು ವಿವರವಾಗಿ ಅಧ್ಯಯನ ಮಾಡಿದರೆ ಇನ್ನಷ್ಟು ವಿಷಯಗಳು ಬೆಳಕಿಗೆ ಬರಬಹುದು ಎಂದು ಪ್ರೊ.ಟಿ.ಮುರುಗೇಶಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.







