ಕ್ರೀಡಾ ಕ್ಷೇತ್ರದಲ್ಲೂ ದೇಶ ಮುಂದಿದೆ ಎಂಬುದನ್ನು ತೋರಿಸಬೇಕು: ಸಂಜೀವ ಮಠಂದೂರು

ಪುತ್ತೂರು: ಅಭಿವೃದ್ಧಿಯಲ್ಲಿ ಮುಂದಿರುವ ನಮ್ಮ ದೇಶವು ಕ್ರೀಡೆಯಲ್ಲಿಯೂ ಮುಂದೆ ಇದೆ ಎಂಬುದನ್ನು ತೋರಿಸುವ ಕಾರ್ಯ ಮಾಡಬೇಕಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ರವಿವಾರ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯಸರ್ಕಾರಿ ನೌಕರರ ಸಂಘ ಪುತ್ತೂರು ತಾಲೂಕು ಶಾಖೆಯವತಿಯಿಂದ ಪುತ್ತೂರು ತಾಲೂಕು ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನುನೋಡಿಕೊಂಡು ಸರ್ಕಾರಿ ನೌಕರರ ಬೇಡಿಕೆಗಳಿಗೆ ಮಧ್ಯಂತರ ಪರಿಹಾರ ನೀಡುವ ಕೆಲಸ ಮಾಡಲಾಗುವುದು. ಶಾರೀರಿಕ ದೈಹಿಕ ಸಾಮರ್ಥ್ಯದ ಜತೆಗೆಮಾನಸಿಕವಾಗಿ ಬೆಳೆಯುವ ಕೆಲಸ ಪ್ರತಿಯೊಬ್ಬರಿಂದ ನಡೆಯಬೇಕು. ದೇಹವನ್ನು ದಂಡಿಸಿದಾಗ ಆರೋಗ್ಯವಂತರಾಗಿರಲು ಸಾಧ್ಯ ಎಂದು ಹೇಳಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಖ್ಷ ಚಣಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ ವಿವಿಧ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಕೆಲಸದ ಒತ್ತಡವನ್ನು ತಗ್ಗಿಸುವ ಕಾರ್ಯಮಾಡಬೇಕು. ಸರ್ಕಾರ ಹಾಕಿಕೊಂಡ ಯೋಜನೆ ಅನುಷ್ಠಾನಮಾಡುವ ಕಾರ್ಯವನ್ನು ಬದ್ಧತೆಯಿಂದ ಮಾಡಿದಾಗ ಸರ್ಕಾರಕ್ಕೆಹಾಗೂ ಇಲಾಖೆಗಳಿಗೆ ಹೆಸರು ಲಭಿಸುತ್ತದೆ. ಆರೋಗ್ಯದೃಷ್ಟಿಯಿಂದ ಕ್ರೀಡಾಕೂಟಗಳು ಸಹಕಾರಿಯಾಗಿದ್ದು,ಬಹುಮಾನಕ್ಕಿಂತ ಭಾಗವಹಿ ಸುವಿಕೆ ಬಹಳಷ್ಟು ಪ್ರಾಮುಖ್ಯವಾಗಿದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಶಿವಾನಂದ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕ್ರೀಡಾ ಸಾಧನೆ ಮಾಡಿದ ಸಹ ಶಿಕ್ಷಕಿ ವೇದಾವತಿ ಎ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ.ಕಾರ್ಯಪ್ಪ, ಪುತ್ತೂರು ನೌಕರರ ಸಂಘದ ಮಾಜಿ ಅಧ್ಯಕ್ಷ ಮೌರೀಸ್ ಮಸ್ಕರೇನಿಯಸ್, ಪುತ್ತೂರು ಸರ್ಕಾರಿ ವಾಹನ ಚಾಲಕರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಗಿರಿಧರ ಗೌಡ, ಶಿಕ್ಷಣ ಇಲಾಖೆಯ ನವೀನ್ ರೈ, ಗೌರವಾಧ್ಯಕ್ಷ ರಾಮಚಂದ್ರ, ಕೋಶಾಧಿಕಾರಿ ಕೃಷ್ಣ ಬಿ., ಹಿರಿಯ ಉಪಾಧ್ಯಕ್ಷ ಹರಿಪ್ರಕಾಶ್ ಬೈಲಾಡಿ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಅಬ್ರಹಾಂ ಎಸ್. ಎ. ಸ್ವಾಗತಿಸಿದರು. ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ ಬಿ. ವಂದಿಸಿದರು. ಕ್ರೀಡಾ ಜತೆ ಕಾರ್ಯದರ್ಶಿ ಕೆ.ಎಸ್. ವಿನೋದ್ ಕುಮಾರ್ ನಿರೂಪಿಸಿದರು.
ಫೋಟೋ : ಶಾಸಕ ಸಂಜೀವ ಮಠಂದೂರು ಕ್ರೀಡಾಕೂಟವನ್ನು ಉದ್ಘಾಟಿಸಿದರು.