ನೀಟ್ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು ಸರಕಾರ
ಸಂವಿಧಾನದ ಮೂಲರಚನೆ, ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆ

ಹೊಸದಿಲ್ಲಿ,ಫೆ.19: ದೇಶದಲ್ಲಿಯ ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗಾಗಿ ನಡೆಸುವ ನೀಟ್ ಪರೀಕ್ಷೆಯ ಸಿಂಧುತ್ವವನ್ನು ಪ್ರಶ್ನಿಸಿ ತಮಿಳುನಾಡು ಸರಕಾರವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ನೀಟ್ ಅನ್ನು ಏಕೈಕ ಮಾರ್ಗವನ್ನಾಗಿಸಿರುವುದು ಸಂವಿಧಾನದ ಮೂಲರಚನೆ ಹಾಗೂ ಸಮಾನತೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಹಾಗೂ ಒಕ್ಕೂಟ ವ್ಯವಸ್ಥೆಯ ತತ್ತ್ವಗಳಿಗೆ ವಿರುದ್ಧವಾಗಿದೆ ಎಂದು ಘೋಷಿಸುವಂತೆ ಅದು ಸರ್ವೋಚ್ಚ ನ್ಯಾಯಾಲಯವನ್ನು ಕೋರಿದೆ.
ವಕೀಲ ಶಬರೀಶ್ ಸುಬ್ರಮಣಿಯನ್ ಮೂಲಕ ಸಂವಿಧಾನದ ವಿಧಿ 131ರಡಿ ಮೂಲದಾವೆಯಾಗಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಭಾರತ ಒಕ್ಕೂಟವನ್ನು ಪ್ರತಿವಾದಿಯನ್ನಾಗಿಸಲಾಗಿದೆ. ನೀಟ್ ಪರೀಕ್ಷೆಯ ಅಂಕಗಳು ವೈದ್ಯಕೀಯ ಮತ್ತು ಸಂಬಂಧಿತ ಕೋರ್ಸ್ಗಳಿಗೆ ಪ್ರವೇಶಕ್ಕೆ ಮಾನದಂಡವಾಗಿರುವುದು ಭಾರತೀಯ ಸಂವಿಧಾನದ ನಿಬಂಧನೆಗಳಿಗೆ ತೀವ್ರ ವಿರುದ್ಧವಾಗಿದೆ,ಸಂವಿಧಾನದ ಮೂಲರಚನೆಯನ್ನು ಉಲ್ಲಂಘಿಸುತ್ತದೆ ಮತ್ತು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುವುದರಿಂದ ಸ್ಪಷ್ಟವಾಗಿ ನಿರಂಕುಶವಾಗಿದೆ ಎಂದು ನ್ಯಾಯಾಲಯವು ಘೋಷಿಸಬೇಕು ಎಂದು ಅರ್ಜಿಯು ಪ್ರತಿಪಾದಿಸಿದೆ.
ಅರ್ಜಿಯಲ್ಲಿನ ಪ್ರಮುಖಾಂಶಗಳು
► ನೀಟ್ ಪರೀಕ್ಷೆಯ ಅನುಷ್ಠಾನ ಮತ್ತು ಮುಂದುವರಿಕೆಯು ತಮಿಳುನಾಡು ರಾಜ್ಯದ ವಿದ್ಯಾರ್ಥಿಗಳ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಮತ್ತು ತಮಿಳುನಾಡು ರಾಜ್ಯ ಶಿಕ್ಷಣ ಮಂಡಳಿಯೊಂದಿಗೆ ಸಂಯೋಜಿತ ಶಾಲೆಗಳ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿರುವುದು ಸರಕಾರವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರುವುದನ್ನು ಅನಿವಾರ್ಯವಾಗಿಸಿದೆ.
► ನೀಟ್ ಪರೀಕ್ಷೆಯ ಅನುಷ್ಠಾನವು ವೈದ್ಯಕೀಯ ಕಾಲೇಜುಗಳಲ್ಲಿ ಸರಕಾರಿ ಸೀಟುಗಳಿಗೆ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡುವ ರಾಜ್ಯಗಳ ಅಧಿಕಾರವನ್ನು ಕಿತ್ತುಕೊಳ್ಳುವುದರಿಂದ ಅದು ಒಕ್ಕೂಟ ಸ್ವರೂಪದ ಉಲ್ಲಂಘನೆಯೂ ಆಗಿದೆ.
► ಶಿಕ್ಷಣವು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ ಮತ್ತು ರಾಜ್ಯ ವಿವಿಗಳಲ್ಲಿ ಶಿಕ್ಷಣವನ್ನು ನಿಯಂತ್ರಿಸುವ ಹಕ್ಕನ್ನು ರಾಜ್ಯಗಳು ಹೊಂದಿವೆ.
► ಖಾಸಗಿ ಅಥವಾ ರಾಜ್ಯ ಅಥವಾ ಕೇಂದ್ರ ಸರಕಾರಿ ಕಾಲೇಜುಗಳು ಸೇರಿದಂತೆ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕೆ ನೀಟ್ ಅನ್ನು ಜಾರಿಗೊಳಿಸಿರುವುದು ಒಕ್ಕೂಟ ಸ್ವರೂಪದ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿರ್ಣಯಗಳನ್ನು ತೆಗೆದುಕೊಳ್ಳುವ ರಾಜ್ಯಗಳ ಸ್ವಾಯತ್ತತೆಯ ಉಲ್ಲಂಘನೆಯಾಗಿದೆ.
► ನೀಟ್ ಪರೀಕ್ಷೆಯು ತಮಿಳುನಾಡಿನ ಗ್ರಾಮೀಣ ಪ್ರದೇಶಗಳ ಮತ್ತು ರಾಜ್ಯ ಶಿಕ್ಷಣ ಮಂಡಳಿಯ ಮಾನ್ಯತೆ ಹೊಂದಿರುವ ಶಾಲೆಗಳ ಭಾರೀ ಸಂಖ್ಯೆಯ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿದೆ. ನೀಟ್ ಪರೀಕ್ಷೆಯು ತಮಿಳನಾಡು ಶಿಕ್ಷಣ ಮಂಡಳಿಯ ಪಠ್ಯಕ್ರಮಕ್ಕಿಂತ ಸಾಕಷ್ಟು ಭಿನ್ನವಾಗಿರುವ ಸಿಬಿಎಸ್ಇ/ಎನ್ಸಿಇಆರ್ಟಿ ಪಠ್ಯಕ್ರಮವನ್ನು ಆಧರಿಸಿರುವುದರಿಂದ ಈ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗುವಲ್ಲಿ ಭಾರೀ ಅನನುಕೂಲತೆಗಳನ್ನು ಎದುರಿಸುತ್ತಿದ್ದಾರೆ.
► ನೀಟ್ ಅಸಮಾನತೆಯನ್ನು ಹೆಚ್ಚಿಸುತ್ತದೆ. ಆರ್ಥಿಕ ಸಂಪನ್ಮೂಲಗಳ ಕೊರತೆ,ತರಬೇತಿಯ ಅಲಭ್ಯತೆ,ಒಂದು ವರ್ಷವನ್ನು ಕೈಬಿಟ್ಟು ಪುನರಪಿ ಪರೀಕ್ಷಗೆ ಹಾಜರಾಗಲು ಅಸಾಮರ್ಥ್ಯದಂತಹ ಹಲವಾರು ಇತರ ಅಂಶಗಳೂ ಈ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತವೆ. ಹೀಗಾಗಿ ಈ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದರೂ ಮತ್ತು ತಮ್ಮ 12ನೇ ತರಗತಿಯ ಪರೀಕ್ಷೆಗಳಲ್ಲಿ ಅಧಿಕ ಅಂಕಗಳನ್ನು ಗಳಿಸಿದ್ದರೂ ಹೆಚ್ಚಿನ ಸಂಪನ್ಮೂಲಗಳನ್ನು ಹೊಂದಿರುವ ನಗರ ಮತ್ತು ಅರೆನಗರ ವಿದ್ಯಾರ್ಥಿಗಳೊಂದಿಗೆ ಸಮಾನವಾಗಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.







