ಸಿರಿಯಾ: ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ 15 ಮಂದಿ ಮೃತ್ಯು

ದಮಾಸ್ಕಸ್, ಫೆ.19: ಸಿರಿಯಾ ರಾಜಧಾನಿ ದಮಾಸ್ಕಸ್ ನ ನೆರೆಯ ನಗರದ ಮೇಲೆ ರವಿವಾರ ಬೆಳಿಗ್ಗೆ ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದು ಸಿರಿಯಾದ ಭದ್ರತಾ ಪಡೆಗಳ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿದ್ದ ಕಟ್ಟಡ ಧ್ವಂಸಗೊಂಡಿದೆ ಎಂದು ವರದಿಯಾಗಿದೆ.
ಸಿರಿಯಾದ ಹಿರಿಯ ಅಧಿಕಾರಿಗಳು, ಭದ್ರತಾ ಏಜೆನ್ಸಿ ಹಾಗೂ ಗುಪ್ತಚರ ವಿಭಾಗದ ಕೇಂದ್ರಕಚೇರಿ ಇರುವ ಕಫರ್ಸೌಸಾ ನಗರದ ಮೇಲೆ ದಾಳಿ ನಡೆಸಲಾಗಿದೆ. ಶನಿವಾರ ಮಧ್ಯರಾತ್ರಿಯ ಬಳಿಕ ಇಸ್ರೇಲಿ ಶತ್ರುಗಳು ಆಕ್ರಮಿತ ಗೋಲಾನ್ ಹೈಟ್ಸ್ ಕಡೆಯಿಂದ ದಮಾಸ್ಕಸ್ ಮತ್ತು ಅದರ ಸುತ್ತಮುತ್ತಲಿನ ಹಲವು ನಗರಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದ್ದು ಮನೆ ಹಾಗೂ ಕಟ್ಟಡಗಳಿಗೆ ಹಾನಿಯಾಗಿದೆ. ಓರ್ವ ಯೋಧ ಸೇರಿದಂತೆ 15 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಸಿರಿಯಾದ ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.
ರವಿವಾರ ನಡೆದ ದಾಳಿಯು ಸಿರಿಯಾ ರಾಜಧಾನಿಯ ಮೇಲೆ ನಡೆದ ಅತ್ಯಂತ ಮಾರಣಾಂತಿಕ ದಾಳಿಯಾಗಿದೆ ಎಂದು ಮಾನವಹಕ್ಕುಗಳ ಮೇಲ್ವಿಚಾರಣಾ ಸಂಸ್ಥೆಯ ಸಿರಿಯಾ ವಿಭಾಗದ ಮುಖ್ಯಸ್ಥ ಅಬ್ದುಲ್ ರಹ್ಮಾನ್ ಹೇಳಿದ್ದಾರೆ. ಫೆಬ್ರವರಿ 6ರಂದು ಸಂಭವಿಸಿದ ಭೀಕರ ಭೂಕಂಪದಿಂದ ಚೇತರಿಸಿಕೊಳ್ಳುತ್ತಿರುವ ಸಿರಿಯಾಕ್ಕೆ ರವಿವಾರ ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿ ಗಾಯದ ಮೇಲೆ ಬರೆಇಟ್ಟಂತಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.