ಬಲೂನು ಪ್ರಕರಣದಲ್ಲಿ ಅಮೆರಿಕದ ಅತಿರೇಕದ ವರ್ತನೆ: ಬ್ಲಿಂಕೆನ್ ಜತೆಗಿನ ಚರ್ಚೆಯಲ್ಲಿ ವಾಂಗ್ಯಿ ಹೇಳಿಕೆ

ಬೀಜಿಂಗ್, ಫೆ.19: ಅಮೆರಿಕದ ವಾಯುಪ್ರದೇಶದಲ್ಲಿ ಕಂಡುಬಂದ ಚೀನಾದ ಬಲೂನಿನ ಪ್ರಕರಣವನ್ನು ಅಮೆರಿಕ ಸೂಕ್ತವಾಗಿ ನಿರ್ವಹಿಸದೆ, ಅನಗತ್ಯ ಬಲಪ್ರಯೋಗಿಸಿದ್ದರಿಂದ ಚೀನಾ-ಅಮೆರಿಕ ದ್ವಿಪಕ್ಷೀಯ ಸಂಬಂಧಕ್ಕೆ ತೀವ್ರ ಹಾನಿಯಾಗಿದೆ ಎಂದು ಚೀನಾ ರವಿವಾರ ಆಕ್ರೋಶ ವ್ಯಕ್ತಪಡಿಸಿದೆ.
ಜರ್ಮನಿಯ ಮ್ಯೂನಿಚ್ ನಲ್ಲಿ ನಡೆಯುತ್ತಿರುವ 59ನೇ ಮ್ಯೂನಿಚ್ ಭದ್ರತಾ ಸಮಾವೇಶದ ನೇಪಥ್ಯದಲ್ಲಿ ವಾಂಗ್ ಯಿ(Wang Yi) ಹಾಗೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ (Antony Blinken) ನಡುವೆ ನಡೆದ ಮಾತುಕತೆ ಸಂದರ್ಭ ಬಲೂನು ಪ್ರಕರಣದ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.
ವಿಶ್ವದಾದ್ಯಂತ ಹಲವು ಬಲೂನುಗಳು ಹಾರಾಟ ನಡೆಸುತ್ತಿವೆ. ಅವೆಲ್ಲವನ್ನೂ ಅಮೆರಿಕ ಹೊಡೆದುರುಳಿಸುತ್ತದೆಯೇ? ಚೀನಾದ ನಾಗರಿಕ ಉದ್ದೇಶದ ಬಲೂನನ್ನು ಅನವಶ್ಯಕವಾಗಿ ಹೊಡೆದುರುಳಿಸಿರುವುದು ಅಸಂಬದ್ಧ ಕೃತ್ಯವಾಗಿದೆ. ದುರದೃಷ್ಟವಶಾತ್ ಅಮೆರಿಕ ಮೂಲಭೂತ ವಿಷಯಗಳನ್ನು ನಿರ್ಲಕ್ಷಿಸಿತು ಮತ್ತು ಬೆದರಿಕೆಯಲ್ಲದ ವಾಯುನೌಕೆಯನ್ನು ಕ್ಷಿಪಣಿಯಿಂದ ಹೊಡೆದುರುಳಿಸುವ ಮೂಲಕ ಉನ್ಮಾದಕರ ರೀತಿಯಲ್ಲಿ ವರ್ತಿಸಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ವಿದೇಶಾಂಗ ವ್ಯವಹಾರ ವಿಭಾಗದ ನಿರ್ದೇಶಕ ವಾಂಗ್ ಯಿ ಹೇಳಿದ್ದಾರೆ.
`ಬಲೂನು ಪ್ರಕರಣದಲ್ಲಿ ಅಮೆರಿಕದ ಅತಿರೇಕದ ವರ್ತನೆ ಮತ್ತು ಅನಗತ್ಯ ಬಲಪ್ರಯೋಗದಿಂದ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಆಗಿರುವ ಹಾನಿಯನ್ನು ಅರಿತುಕೊಂಡು ಅದನ್ನು ಸರಿಪಡಿಸುವ ಕೆಲಸವನ್ನು ಅಮೆರಿಕ ಮಾಡಬೇಕಿದೆ . ಅಮೆರಿಕವು ಚೀನಾದ ಬಗ್ಗೆ ಸಕಾರಾತ್ಮಕ ಮತ್ತು ಪ್ರಾಯೋಗಿಕ ನೀತಿಯನ್ನು ಅನುಸರಿಸಬಹುದು ಮತ್ತು ಚೀನಾ-ಅಮೆರಿಕ ಸಂಬಂಧವನ್ನು ಆರೋಗ್ಯಕರ, ಅಭಿವೃದ್ಧಿಯ ಹಾದಿಗೆ ಮರಳಿಸಲು ಚೀನಾದೊಂದಿಗೆ ಕೆಲಸ ಮಾಡಬಹುದು ಎಂದು ನಾವು ಭಾವಿಸುತ್ತೇವೆ' ಎಂದು ವಾಂಗ್ ಯಿ ಆಗ್ರಹಿಸಿರುವುದಾಗಿ ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಬೇಜವಾಬ್ದಾರಿಯ ಕೃತ್ಯ: ಅಮೆರಿಕ ಪ್ರತಿಕ್ರಿಯೆ
ಬಲೂನು ಪ್ರಕರಣದಲ್ಲಿ ಅಮೆರಿಕ ಉನ್ಮಾದಕರ ರೀತಿಯಲ್ಲಿ ವರ್ತಿಸಿದೆ ಎಂಬ ಚೀನಾದ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ಇಂತಹ ಬೇಜವಾಬ್ದಾರಿಯ ಕೃತ್ಯವನ್ನು ಚೀನಾ ಪುನರಾವರ್ತಿಸಬಾರದು ಎಂದು ಆಗ್ರಹಿಸಿದ್ದಾರೆ.
ಜರ್ಮನಿಯ ಮ್ಯೂನಿಚ್ ನಲ್ಲಿ ನಡೆಯುತ್ತಿರುವ 59ನೇ ಮ್ಯೂನಿಚ್ ಭದ್ರತಾ ಸಮಾವೇಶದ ನೇಪಥ್ಯದಲ್ಲಿ ಚೀನಾದ ಉನ್ನತ ಅಧಿಕಾರಿ ವಾಂಗ್ ಯಿ ಜತೆ ನಡೆಸಿದ ಸಭೆಯ ಸಂದರ್ಭ ಬ್ಲಿಂಕೆನ್ ಬಲೂನು ಹೊಡೆದುರುಳಿಸಿದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ನಮ್ಮ ಸಾರ್ವಭೌಮತೆಗೆ ಧಕ್ಕೆಯಾಗುವ ಯಾವುದೇ ಕೃತ್ಯವನ್ನೂ ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಬ್ಲಿಂಕೆನ್ ಸ್ಪಷ್ಟಪಡಿಸಿದ್ದಾರೆ. ಚೀನಾದ ಬಲೂನು ಕಣ್ಗಾವಲು ಕಾರ್ಯಕ್ರಮವು 5 ಖಂಡಗಳಾದ್ಯಂತ ಸುಮಾರು 40ಕ್ಕೂ ಅಧಿಕ ದೇಶಗಳ ವಾಯುಕ್ಷೇತ್ರವನ್ನು ಉಲ್ಲಂಘಿಸಿದೆ ಮತ್ತು ಚೀನಾದ ಕೃತ್ಯವನ್ನು ಜಾಗತಿಕ ಸಮುದಾಯದ ಎದುರು ತೆರೆದಿಟ್ಟಿದೆ ಎಂದು ಬ್ಲಿಂಕೆನ್ ಪ್ರತಿಪಾದಿಸಿದರು ಎಂದು ವರದಿಯಾಗಿದೆ.







