ಯುಎಇ: ವೀಸಾ, ಎಂಟ್ರಿ ಪರ್ಮಿಟ್ ನವೀಕರಣ; ಇಲ್ಲಿದೆ ಮಾಹಿತಿ

ಅಬುಧಾಬಿ, ಫೆ.19: ವೀಸಾ, ಎಂಟ್ರಿ ಪರ್ಮಿಟ್ ನಲ್ಲಿ ಹೊಸ ನವೀಕರಣವನ್ನು ಯುಎಇಯ `ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ, ಕಸ್ಟಮ್ಸ್ ಆ್ಯಂಡ್ ಪೋಟ್ರ್ಸ್ ಸೆಕ್ಯುರಿಟಿ' ಘೋಷಿಸಿದ್ದು ಇದು 2013ರ ಫೆಬ್ರವರಿ 1ರಿಂದ ಜಾರಿಗೆ ಬಂದಿರುವುದಾಗಿ ಎಮಿರೇಟ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ನಾಗರಿಕರು, ನಿವಾಸಿಗಳು, ಸಂದರ್ಶಕರು ಸೇರಿದಂತೆ ಎಲ್ಲಾ ವರ್ಗದಲ್ಲೂ ಬದಲಾವಣೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದರಲ್ಲಿ ಕೆಲವು ಪ್ರಮುಖ ಅಂಶಗಳು ಹೀಗಿವೆ:
ಪ್ರವಾಸಿಗಳಿಗೆ(ಗುಂಪು ಕುಟುಂಬ ವೀಸಾ) ಚಿಕಿತ್ಸೆಗಾಗಿ (ಏಕ ಮತ್ತು ಬಹು ಎಂಟ್ರಿ ಪರ್ಮಿಟ್) 60 ದಿನದಿಂದ 180 ದಿನಗಳಾವಧಿಯ ವೀಸಾ ಮತ್ತು ಎಂಟ್ರಿ ಪರ್ಮಿಟ್; ರೋಗಿಗಳ ಜತೆಗಿರುವವರಿಗೂ 60ರಿಂದ 180 ದಿನಗಳಾವಧಿಯ ಏಕ ಮತ್ತು ಬಹು ಎಂಟ್ರಿ ಪರ್ಮಿಟ್; ಪಾಸ್ಪೋರ್ಟ್ ನೀಡಿಕೆ, ನವೀಕರಣ ಅಥವಾ ಬದಲಿಗಾಗಿ ಅರ್ಜಿ ಸಲ್ಲಿಸುವಾಗ ಬೆರಳಚ್ಚು ದಾಖಲೆಯಿಂದ ವಿಶೇಷ ಅಗತ್ಯವಿರುವ ಜನರಿಗೆ ವಿನಾಯಿತಿ; 90 ದಿನಗಳ ವೀಸಾ ಹೊಂದಿರುವವರಿಗೆ 30 ದಿನಗಳ ವಿಸ್ತರಣೆಯನ್ನು ಅನುಮತಿಸುವುದು; ಇದು 6 ತಿಂಗಳಿಗಿಂತ ಹೆಚ್ಚುಕಾಲ ಮಾನ್ಯವಾಗಿರುವ ರೆಸಿಡೆನ್ಸಿ ವೀಸಾಗಳ ನವೀಕರಣವನ್ನು ಒಳಗೊಂಡಿರುವುದಿಲ್ಲ; ಎಮಿರೇಟ್ಸ್ ಐಡಿ ಇಲ್ಲದ ಗಲ್ಫ್ ಸಹಕಾರ ಮಂಡಳಿ(ಜಿಸಿಸಿ) ನಾಗರಿಕರ ಖಾತೆಗಳಲ್ಲಿ ವೀಸಾ ಡೇಟಾಕ್ಕಾಗಿ ರದ್ದತಿ ಮತ್ತು ತಿದ್ದುಪಡಿ ಸೇವೆಗಳು ಲಭ್ಯವಿರುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.







