ರಶ್ಯ: ಬೆಲ್ ಮಾಧ್ಯಮ ಸಂಸ್ಥೆಗೆ ನಿರ್ಬಂಧ

ಮಾಸ್ಕೊ, ಫೆ.19: ಸ್ವತಂತ್ರ ಸುದ್ಧಿಮಾಧ್ಯಮಗಳ ವಿರುದ್ಧದ ಕಾರ್ಯಾಚರಣೆ ಮುಂದುವರಿಸಿರುವ ರಶ್ಯ ಆಡಳಿತ, ಪ್ರಮುಖ ಪತ್ರಕರ್ತ ಯೆಲಿಝವೆಟ ಒಸೆಟಿಂಸ್ಕಯ(Yelizaveta Osetinskaya) ಸ್ಥಾಪಿಸಿರುವ `ಬೆಲ್' (Bell) ಮಾಧ್ಯಮ ಸಂಸ್ಥೆಗೆ ನಿರ್ಬಂಧ ಹೇರಿರುವುದಾಗಿ ಸ್ಥಳೀಯ ಮಾಧ್ಯಮಗಳು ರವಿವಾರ ವರದಿ ಮಾಡಿವೆ.
ಉಕ್ರೇನ್ ವಿರುದ್ಧ ತಾನು ನಡೆಸುತ್ತಿರುವ `ವಿಶೇಷ ಸೇನಾ ಕಾರ್ಯಾಚರಣೆ'ಗೆ ಸಂಬಂಧಿಸಿ ಸುಳ್ಳುವರದಿ ಪ್ರಸಾರ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುತ್ತಿದೆ ಎಂದು ರಶ್ಯದ ಅಧಿಕಾರಿಗಳು ಪ್ರತಿಪಾದಿಸುತ್ತಿದ್ದಾರೆ. ಪ್ರಮುಖವಾಗಿ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಸುದ್ಧಿಗಳನ್ನು ಪ್ರಕಟಿಸುವ ಬೆಲ್, ಉಕ್ರೇನ್ ಯುದ್ಧದಿಂದ ರಶ್ಯದ ಅರ್ಥವ್ಯವಸ್ಥೆಯ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ವಿಶೇಷ ವರದಿ ಪ್ರಕಟಿಸುತ್ತಿತ್ತು.
ಸ್ವತಂತ್ರ ಸುದ್ಧಿಸಂಸ್ಥೆಗಳಾದ ಮೀಡಿಯಾಝೋನ್, ಮೆಡುಝಾ ಮತ್ತು ನೊವಾಯ ಗಝೆಟ್ ಮೇಲೆ ಈಗಾಗಲೇ ನಿರ್ಬಂಧ ಜಾರಿಗೊಂಡಿದೆ. ಈ ಹಿಂದೆ `ಫೋರ್ಬ್ಸ್'ನ ರಶ್ಯನ್ ಆವೃತ್ತಿಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಯೆಲಿಝವೆಟ ಒಸೆಟಿಂಸ್ಕಯ 2017ರಲ್ಲಿ ಬೆಲ್ ಸುದ್ಧಿಸಂಸ್ಥೆಯನ್ನು ಸ್ಥಾಪಿಸಿದ್ದರು. ಒಸೆಟಿಂಸ್ಕಯ ಹಾಗೂ ಬೆಲ್ ಮಾಧ್ಯಮಕ್ಕೆ `ವಿದೇಶಿ ಏಜೆಂಟರು' ಎಂಬ ಹಣೆಪಟ್ಟಿಯನ್ನು ರಶ್ಯ ನೀಡಿದ್ದು ಈ ಪಟ್ಟಿಯಲ್ಲಿ ಗುರುತಿಸಿಕೊಳ್ಳುವ ಮಾಧ್ಯಮಗಳ ಮೇಲೆ ಅಧಿಕಾರಿಗಳು ಹೆಚ್ಚಿನ ನಿಗಾ ಇರಿಸುತ್ತಾರೆ.
ಕೆಲವು ಮಾಧ್ಯಮಗಳು ಉಕ್ರೇನ್ ಯುದ್ಧದ ವರದಿಯಲ್ಲಿ ಪಕ್ಷಪಾತ ತೋರುತ್ತಿದ್ದು ಬಿಕ್ಕಟ್ಟಿನ ಮೂಲವನ್ನು ಕಡೆಗಣಿಸಿ, ಬಹಿರಂಗವಾಗಿ ಉಕ್ರೇನ್ ಪರ ನಿಲುವು ಪ್ರದರ್ಶಿಸುತ್ತಿವೆ. ಪಾಶ್ಚಿಮಾತ್ಯ ಪತ್ರಕರ್ತರು ವೃತ್ತಿಪರವಲ್ಲದ ರೀತಿಯಲ್ಲಿ ವರ್ತಿಸಿದರೆ ಮತ್ತು ರಶ್ಯ ಅಥವಾ ಅದರ ಜನರನ್ನು ಒರಟಾಗಿ ನಡೆಸಿಕೊಂಡರೆ ಅದನ್ನು ಸಹಿಸಿಕೊಳ್ಳಲಾಗದು ಎಂದು ರಶ್ಯದ ವಿದೇಶಾಂಗ ಇಲಾಖೆ ಶುಕ್ರವಾರ ಎಚ್ಚರಿಕೆ ನೀಡಿದೆ.
ಸ್ವತಂತ್ರ ಸುದ್ಧಿವಾಹಿನಿಗಳನ್ನು ನಿರ್ಬಂಧಿಸುವ ಮೂಲಕ , ಯುದ್ಧದ ಕುರಿತ ನೈಜ ಚಿತ್ರಣ ರಶ್ಯ ನಾಗರಿಕರಿಗೆ ತಲುಪದಂತೆ ತಡೆದು ಇಡೀ ಮಾಧ್ಯಮ ವ್ಯವಸ್ಥೆಯನ್ನು ನಿಯಂತ್ರಿಸಲು ರಶ್ಯ ಪ್ರಯತ್ನಿಸುತ್ತಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಹೇಳಿವೆ.







