ಎಫ್‍ಐಆರ್ ವಿಳಂಬ ತನಿಖಾ ಪ್ರಕ್ರಿಯೆ ಅಮಾನ್ಯಗೊಳಿಸುವುದಿಲ್ಲ: ಹೈಕೋರ್ಟ್

ಬೆಂಗಳೂರು: ಸಂಭಾವ್ಯ ಅಪರಾಧ ಕೃತ್ಯದ ಬಗ್ಗೆ ಮಾಹಿತಿ ಪಡೆದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯು ತಕ್ಷಣವೇ ಎಫ್‍ಐಆರ್ ದಾಖಲಿಸುವುದು ಕಡ್ಡಾಯವಲ್ಲ, ಇಂತಹ ಸಂದರ್ಭಗಳಲ್ಲಿ ವಿಳಂಬವಾಗಿ ದಾಖಲಿಸಿದ ಎಫ್‍ಐಆರ್ ಕೂಡ ಮಾನ್ಯವಾಗುತ್ತದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಮಾನವ ಕಳ್ಳಸಾಗಣೆಗಾಗಿ ನಕಲಿ ಪಾಸ್‍ಪೋರ್ಟ್ ಸಿದ್ದಪಡಿಸಿದ ಆರೋಪದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದುಪಡಿಸುವಂತೆ ಕೋರಿ ಇಕ್ಬಾಲ್ ಅಹ್ಮದ್ ಎಂಬಾತ ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ತೀರ್ಪು ಪ್ರಕಟಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಸಂಭಾವ್ಯ ಅಪರಾಧ ಕೃತ್ಯದ ಬಗ್ಗೆ ಪೊಲೀಸರು ದೂರವಾಣಿ ಮೂಲಕ ಮಾಹಿತಿ ಪಡೆದ ಸಂದರ್ಭದಲ್ಲಿ ಆ ಕುರಿತು ತಕ್ಷಣವೇ ಎಫ್‍ಐಆರ್ ದಾಖಲಿಸುವುದು ಕಡ್ಡಾಯವಲ್ಲ. ಮಾಹಿತಿ ಪಡೆದ ಕೂಡಲೇ ಅಪರಾಧ ಕೃತ್ಯ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದು ಪೊಲೀಸ್ ಅಧಿಕಾರಿಯ ಮೊದಲ ಕರ್ತವ್ಯವಾಗಿರುತ್ತದೆ.
ಒಂದೊಮ್ಮೆ ಅವರ ಸಮ್ಮುಖದಲ್ಲಿ ಅಪರಾಧ ಕೃತ್ಯ ನಡೆದರೆ ಸಿಆರ್‍ಪಿಸಿ ಸೆಕ್ಷನ್ 41 ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕು. ನಂತರ ಕಾಗ್ನಿಜಬಲ್ ಅಪರಾಧ ಕೃತ್ಯ ನಡೆದಿರುವ ಸನ್ನಿವೇಶದಲ್ಲಿ ಸಿಆರ್‍ಪಿಸಿ ಸೆಕ್ಷನ್ 154ರ ಪ್ರಕಾರ ಎಫ್‍ಐಆರ್ ದಾಖಲಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣವೇನು: ಮಾನವ ಕಳ್ಳಸಾಗಣೆಗಾಗಿ ಕಾಲ್ಪನಿಕ ಹೆಸರಿನಲ್ಲಿ ನಕಲಿ ಪಾಸ್‍ಪೋರ್ಟ್ ಸಿದ್ಧಪಡಿಸಲು ಖಾಸಗಿ ಕಂಪೆನಿ ಉದ್ಯೋಗಿಗಳನ್ನು ಸಂಪರ್ಕಿಸುತ್ತಿದ್ದಾರೆ ಎಂಬ ಬಗ್ಗೆ 2009ರಲ್ಲಿ ಬೆಂಗಳೂರಿನ ಸಂಪಿಗೆನಗರ ಪೊಲೀಸ್ ರಾಣಿಗೆ ಮಾಹಿತಿ ಬಂದಿತ್ತು. ಅದರಂತೆ ಪ್ರಕರಣ ಭೇದಿಸಲು ಪೊಲೀಸರು ರಚಿಸಿದ್ದ ತಂಡದ ಅಧಿಕಾರಿಗಳು ತನಿಖೆ ಕೈಗೊಂಡು ಶಂಕಿತ ಆರೋಪಿಗಳನ್ನು ಬಂಧಿಸಿ, ಕೆಲವೊಂದು ವಸ್ತುಗಳನ್ನು ವಶಪಡಿಸಿಕೊಂಡಿದ್ದರು.
ಪ್ರಕರಣದಲ್ಲಿ ಇಕ್ಬಾಲ್ ಅಹ್ಮದ್ ಪಾತ್ರವಿದೆ ಎಂದು ವಿಚಾರಣೆ ವೇಳೆ ಬಂಧಿತರ ಪೈಕಿ ಓರ್ವ ಹೇಳಿಕೆ ನೀಡಿದ್ದ, ನಂತರ ಪ್ರಕರಣವು ಸಿಬಿಐಗೆ ವರ್ಗಾವಣೆಯಾಗಿತ್ತು. ತನಿಖೆ ಪೂರ್ಣಗೊಳಿಸಿದ್ದ ಸಿಬಿಐ ಪೊಲೀಸರು, ಇಕ್ಬಾಲ್ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಸಿಬಿಐ ವಿಶೇಷ ನ್ಯಾಯಾಲಯ ಇಕ್ಬಾಲ್‍ಗೆ ಶಿಕ್ಷೆ ವಿಧಿಸಿತ್ತು. ಆ ಆದೇಶವನ್ನು ಸೆಷನ್ಸ್ ನ್ಯಾಯಾಲಯವೂ ಪುರಸ್ಕರಿಸಿತ್ತು. ಈ ಹಿನ್ನಲೆಯಲ್ಲಿ ಪ್ರಕರಣದಿಂದ ತನ್ನನ್ನು ಖುಲಾಸೆಗೊಳಿಸುವಂತೆ ಕೋರಿ ಇಕ್ಬಾಲ್ ಹೈಕೋರ್ಟ್‍ಗೆ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಆರೋಪಿ ಪರ ವಕೀಲರು ವಾದಿಸಿ, ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗೆ ಠಾಣೆಯಲ್ಲಿ ಇರಬೇಕಾದರೆ ಮಾಹಿತಿ ಬಂದಿತ್ತು. ಸಂಭವಿಸುವ ಅಪರಾಧ ಕೃತ್ಯದ ಬಗ್ಗೆ ದೂರವಾಣಿ ಮೂಲಕ ಅವರಿಗೆ ಮಾಹಿತಿ ಇದ್ದರೂ ಸ್ಥಳಕ್ಕೆ ತೆರಳುವ ಮುನ್ನ ಎಫ್‍ಐಆರ್ ದಾಖಲಿಸಿಲ್ಲ, ಹೀಗಾಗಿ, ಪ್ರಕರಣದ ತನಿಖೆ ಮತ್ತು ಮುಂದಿನ ಪ್ರಕ್ರಿಯೆಗಳು ದೋಷಪೂರಿತವಾಗಿವೆ. ಹೀಗಾಗಿ, ಅರ್ಜಿದಾರರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿದ್ದರು.







