ಜಮ್ಮು ಕಾಶ್ಮೀರ: ಭೂಕುಸಿತ ಪೀಡಿತ ಪ್ರದೇಶದಿಂದ 13 ಕುಟುಂಬ ಸ್ಥಳಾಂತರ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಮ್ಬನ್ ಜಿಲ್ಲೆಯ ದಕ್ಸರ್ದಾಲ್ ಗ್ರಾಮದ ಗುಡ್ಡಗಾಡು ಪ್ರದೇಶದ ಬೆಟ್ಟದ ತಪ್ಪಲಿನಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿ ಹಾನಿಯಾದ ಹದಿಮೂರು ಮನೆಗಳ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಗೂಲ್ ಉಪವಿಭಾಗದ ಸಂಗಲ್ದಾನ್ ಪ್ರದೇಶದ ದಕ್ಸರ್ದಾಲ್ ಗ್ರಾಮದಲ್ಲಿ ಮತ್ತೊಂದು ಬೆಟ್ಟಪ್ರದೇಶದ ಉಪಗ್ರಾಮದಿಂದ 4-5 ಕುಟುಂಬಗಳನ್ನು ಸುಮಾರು ಹದಿನೈದು ದಿನಗಳ ಹಿಂದೆ ಸ್ಥಳಾಂತರಿಸಲಾಗಿತ್ತು.
ಫೆಬ್ರುವರಿ 3ರಂದು ದೋಡಾ ಜಿಲ್ಲೆಯ ನಯಿಬಸ್ತಿ- ತತ್ರಿ ಎಂಬಲ್ಲಿ 19 ಮನೆಗಳು, ಒಂದು ಮಸೀದಿ ಮತ್ತು ಮದರಸದಲ್ಲಿ ಭೂಕುಸಿತದಿಂದಾಗಿ ಬಿರುಕು ಕಾಣಿಸಿಕೊಂಡಿತ್ತು.
"ದುಕ್ಸರ್ ದಾಲ್ ಗ್ರಾಮದಲ್ಲಿ ಒಟ್ಟು 13 ಮನೆಗಳು ಅಪಾಯದ ಸ್ಥಿತಿಯಲ್ಲಿದೆ ಎಂದು ಘೋಷಿಸಲಾಗಿದ್ದು, ಸಂತ್ರಸ್ತ ಕುಟುಂಬಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿ ಟೆಂಟ್, ಪಡಿತ, ಪಾತ್ರೆ ಸಾಮಗ್ರಿ, ಹೊದಿಕೆಗಳನ್ನು ತಕ್ಷಣದ ಪರಿಹಾರವಾಗಿ ಒದಗಿಸಲಾಗಿದೆ" ಎಂದು ಉಪವಿಭಾಗಾಧಿಕಾರಿ ತನ್ವೀರ್ ಉಲ್ ಮಜೀದ್ ವಾನಿ ಹೇಳಿದಾರೆ. ಭೌಗೋಳಿಕ ತಜ್ಞರು ಭೇಟಿ ನೀಡಿ ಪರಿಸ್ಥಿತಿಯನ್ನು ವಿಶ್ಲೇಷಿಸುವವರೆಗೆ ಈ ಭಾಗದಲ್ಲಿ ಎಲ್ಲ ಚಟುವಟಿಕೆಗಳನ್ನೂ ನಿರ್ಬಂಧಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಫೆಬ್ರುವರಿ 3ರಂದು ಆರಂಭವಾದ ಭೂಕುಸಿದಿಂದ ಸ್ಥಳೀಯ ಸ್ಮಶಾನ, ಕೃಷಿಭೂಮಿಗಳು ಹಾನಿಯಾಗಿದೆ. ಆರಂಭದಲ್ಲಿ ಐದು ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು. ಆದರೆ ಕುಸಿತ ಹೆಚ್ಚಿದ ಹಿನ್ನೆಲೆಯಲ್ಲಿ ಅಪಾಯ ಸಾಧ್ಯತೆಯ 13 ಮನೆಗಳನ್ನು ಸ್ಥಳಾಂತರಿಸಲಾಗಿದೆ ಎಂದು ವಿಡಿಯೋ ಸಂದೇಶದಲ್ಲಿ ವಿವರಿಸಿದ್ದಾರೆ.







