ಉವೈಸಿ ದೆಹಲಿ ನಿವಾಸದ ಮೇಲೆ ಕಿಡಿಗೇಡಿಗಳ ದಾಳಿ

ಹೊಸದಿಲ್ಲಿ: ಆಲ್ ಇಂಡಿಯಾ ಮಜ್ಲೀಸ್-ಇ-ಇತ್ತೇಹಾದುಲ್ ಮುಸ್ಲಮೀನ್ (ಎಐಎಂಐಎಂ) ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರ ದೆಹಲಿ ಮನೆ ಮೇಲೆ ಅಪರಿಚಿತ ಕಿಡಿಗೇಡಿಗಳು ಕಲ್ಲುಗಳನ್ನು ಎಸೆದು ಕಿಟಕಿಗಳಿಗೆ ಹಾನಿಪಡಿಸಿರುವ ಪ್ರಕರಣ ಭಾನುವಾರ ಸಂಜೆ ನಡೆದಿದೆ.
ಹೊಸದಿಲ್ಲಿಯ ಅಶೋಕ ರಸ್ತೆ ಪ್ರದೇಶದಲ್ಲಿರುವ ಉವೈಸಿ ನಿವಾಸದಲ್ಲಿ ಸಂಜೆ 5.30ರ ಸುಮಾರಿಗೆ ಈ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಹೈದರಾಬಾದ್ನ ಸಂಸದರಾಗಿರುವ ಉವೈಸಿ ನಿವಾಸದ ಮೇಲೆ2014ರ ಬಳಿಕ ಇಂಥ ದಾಳಿ ನಡೆಯುತ್ತಿರುವುದು ಇದು ನಾಲ್ಕನೇ ಬಾರಿ.
ಜೈಪುರದಿಂದ ದೆಹಲಿಗೆ ಮರಳಿದ ಬಳಿಕ ಮನೆಕೆಲಸದವರು ಈ ಬಗ್ಗೆ ಮಾಹಿತಿ ನೀಡಿದ್ದಾಗಿ ಉವೈಸಿ ವಿವರಿಸಿದ್ದಾರೆ.
"ರಾತ್ರಿ 11.30ರ ಸುಮಾರಿಗೆ ನಾನು ಮನೆ ತಲುಪಿದೆ. ಮನೆಗೆ ಮರಳಿದಾಗ ಕಿಟಕಿ ಒಡೆದಿರುವುದು ಮತ್ತು ಕಲ್ಲುಗಳು ಬಿದ್ದಿರುವುದು ಕಂಡು ಬಂತು. ಕಿಡಿಗೇಡಿಗಳ ಗುಂಪೊಂದು ಸಂಜೆ 5.30ರ ಸುಮಾರಿಗೆ ದಾಳಿ ನಡೆಸಿದ್ದಾಗಿ ಮನೆ ಕೆಲಸದವರು ಹೇಳಿದರು" ಎಂದು ಸಂಸತ್ ಬೀದಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉವೈಸಿ ವಿವರಿಸಿದ್ದಾರೆ.
"ಇಂಥ ದಾಳಿ ನಡೆಯುತ್ತಿರುವುದು ಇದು ನಾಲ್ಕನೇ ಬಾರಿ. ನಮ್ಮ ಮನೆ ಸುತ್ತಮುತ್ತಲು ಹಲವು ಸಿಸಿ ಕ್ಯಾಮೆರಾಗಳಿವೆ. ಇದರ ಸಹಾಯದಿಂದ ದಾಳಿಕೋರರನ್ನು ಪತ್ತೆ ಮಾಡಿ ಬಂಧಿಸಬಹುದು. ಇಂಥ ಬಿಗಿ ಭದ್ರತೆಯ ಪ್ರದೇಶದಲ್ಲೂ ಇಂಥ ಕೃತ್ಯಗಳು ನಡೆಯುತ್ತಿವೆ ಎಂಬ ಭಾವನೆ ಬರುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ.
ತಕ್ಷಣ ಕ್ರಮ ಕೈಗೊಂಡು ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.







