ಕಲ್ಲಿದ್ದಲು ಹಗರಣ: ಛತ್ತೀಸ್ ಗಢದ ಕಾಂಗ್ರೆಸ್ ಶಾಸಕರು, ಸಿಎಂ ಬಘೇಲ್ ಆಪ್ತರಿಗೆ ಸೇರಿರುವ 14 ಸ್ಥಳಗಳಲ್ಲಿ ಈಡಿ ದಾಳಿ

ರಾಯ್ಪುರ: ಕಲ್ಲಿದ್ದಲು ಲೆವಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈಡಿ) ಸೋಮವಾರ ಬೆಳಗ್ಗೆ ಛತ್ತೀಸ್‌ಗಢದ 14 ಸ್ಥಳಗಳಲ್ಲಿದಾಳಿ ನಡೆಸಿ ಶೋಧ ಕಾರ್ಯ ಆರಂಭಿಸಿದೆ. ದಾಳಿ ನಡೆಸುತ್ತಿರುವ ಕೆಲವು ಸ್ಥಳಗಳು ಕಾಂಗ್ರೆಸ್ ಶಾಸಕರು ಹಾಗೂ ರಾಜ್ಯ ಪಕ್ಷದ ಖಜಾಂಚಿ ಸೇರಿದಂತೆ ಪದಾಧಿಕಾರಿಗಳಿಗೆ ಸಂಬಂಧಿಸಿವೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಎಲ್ಲಾ ರೇಡ್ ಸ್ಥಳಗಳು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರ ಆಪ್ತರಾದ ಶಾಸಕರು ಮತ್ತು ಪದಾಧಿಕಾರಿಗಳಿಗೆ ಸೇರಿವೆ.
ಸಿಎಂ ಬಘೇಲ್ ಅವರು ತಮ್ಮ ನಿವಾಸದಲ್ಲಿ ಬೆಳಗ್ಗೆ 11 ಗಂಟೆಗೆ ವಿದ್ಯಾರ್ಥಿಗಳ ಪತ್ರಿಕಾಗೋಷ್ಠಿಗೆ ಕರೆ ನೀಡಿದ್ದಾರೆ.
ಕಲ್ಲಿದ್ದಲು ಲೆವಿ ಹಗರಣದಲ್ಲಿ ಇತ್ತೀಚೆಗೆ ಸಲ್ಲಿಸಲಾದ ಪ್ರಾಸಿಕ್ಯೂಷನ್ ದೂರಿನಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಕ್ರಿಮಿನಲ್ ಪಿತೂರಿಯಲ್ಲಿ ಅಕ್ರಮವಾಗಿ 25 ಪೈಸೆ ಕಲ್ಲಿದ್ದಲು ಲೆವಿಯನ್ನು ವಿಧಿಸಿದ್ದಾರೆ. ಇದರಿಂದಾಗಿ 540 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಈ ಆದಾಯವನ್ನು ಪಕ್ಷದ ನಿಧಿ ಹಾಗೂ ಇತರ ವ್ಯಕ್ತಿಗಳಿಗೆ ವರ್ಗಾಯಿಸಲಾಗಿದೆ ಎಂದು ಈಡಿ ಆರೋಪಿಸಿದೆ.





