ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಬಹಿರಂಗ ಜಟಾಪಟಿಗೆ ಗೃಹಸಚಿವ ಅಸಮಾಧಾನ
'ಕಾನೂನು ಚೌಕಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಸಿಎಂ ನಿರ್ಧಾರ

ಬೆಂಗಳೂರು, ಫೆ.20: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ನಡುವಿನ ಬಹಿರಂಗ ಜಟಾಪಟಿಗೆ ಗೃಹಸಚಿವ ಆರಗ ಜ್ಞಾನೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳೆಂದರೆ ಜನರಿಗೆ ಅತ್ಯುತ್ತಮ ಗೌರವ ಭಾವನೆಯಿದೆ. ಆದರೆ ಈ ಇಬ್ಬರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವರ್ತನೆ, ನಡವಳಿಕೆ ತೀರಾ ಕೆಟ್ಟದಾಗಿದೆ. ಇಡೀ ಅಧಿಕಾರಿ ವರ್ಗಕ್ಕೆ ಅವಮಾನ ಮಾಡುವಂತೆ ವರ್ತಿಸುತ್ತಿದ್ದಾರೆ. ಅವರ ನಡುವಿನ ವೈಯಕ್ತಿಕ ವಿಚಾರಗಳು ಏನೇ ಇರಲಿ, ಸಾರ್ವಜನಿಕವಾಗಿ ಈ ರೀತಿಯ ವರ್ತನೆ ಸರಿಯಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಯೂ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ವಿಚಾರವಾಗಿ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಲಿದ್ದೇನೆ ಹಾಗೂ ಡಿಜಿಪಿ ಜೊತೆ ಮಾತನಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ʼನನ್ನ ವೈಯಕ್ತಿಕ ಫೋಟೋಗಳನ್ನು ಬಳಸಬೇಡಿʼ: ಮಾಧ್ಯಮಗಳಿಗೆ ರೋಹಿಣಿ ಸಿಂಧೂರಿ ಮನವಿ







