ಕಡಬ | ಆನೆ ದಾಳಿ ಪ್ರಕರಣ: ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ, ಮೃತರ ಕುಟುಂಬಗಳಿಗೆ ಪರಿಹಾರದ ಭರವಸೆ

ಕಡಬ, ಫೆ.20: ರೆಂಜಿಲಾಡಿ ಗ್ರಾಮದ ಇಬ್ಬರು ಇಂದು ಬೆಳಗ್ಗೆ ಕಾಡಾನೆ ದಾಳಿಗೆ ಒಳಗಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಹಾಗೂ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಡಾ.ವೈ.ಕೆ.ದಿನೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ನಿರಂತರ ಆನೆ ಹಾವಳಿಯಿದ್ದರೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶಿತರಾಗಿದ್ದ ಸ್ಥಳೀಯರು ಸ್ಥಳಕ್ಕೆ ಸಚಿವರು, ಜಿಲ್ಲಾಧಿಕಾರಿ ಭೇಟಿ ನೀಡುವಂತೆ ಪಟ್ಟು ಹಿಡಿದಿದ್ದರು. ಅವರು ಭೇಟಿ ನೀಡದೆ ಮೃತದೇಹ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಮೃತರ ಕುಟುಂಬಗಳಿಗೆ ಸರಕಾರದಿಂದ ಪರಿಹಾರಧನ ನೀಡಲು ಕ್ರಮ ಕೈಗೊಳ್ಳಲಾಗುವುದು. ರಂಜಿತಾರ ಸಹೋದರಿಗೆ ತಕ್ಷಣವೇ ಗುತ್ತಿಗೆ ಆಧಾರದಲ್ಲಿ ನೌಕರಿ ವ್ಯವಸ್ಥೆ ಕಲ್ಪಿಸಲಾಗುವುದು. ಅದಲ್ಲದೇ ಕಾಡಾನೆ ಹಾವಳಿ ಹತ್ತಿಕಲು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಡಾ.ವೈ.ಕೆ.ದಿನೇಶ್ ಕುಮಾರ್ ಮಾತನಾಡಿ, ಕಾಡಾನೆ ಹಾವಳಿ ಹತ್ತಿಕ್ಕಲು ಇವತ್ತೇ ಕ್ರಮ ಕೈಗೊಳ್ಳಲಾಗುವುದು. ತಾನು ಸ್ಥಳದಲ್ಲೇ ಮೊಕದ್ದಮೆ ಹೂಡಿ ಇದರ ಉಸ್ತುವಾರಿ ವಹಿಸಿಕೊಳ್ಳುವುದಾಗಿ ತಿಳಿಸಿದರು.
ಇಂದು ಬೆಳಗ್ಗೆ ರೆಂಜಿಲಾಡಿ ಗ್ರಾಮದದಲ್ಲಿ ಕಾಡಾನೆ ದಾಳಿ ನಡೆಸಿ ಸ್ಥಳೀಯರಾದ ರಂಜಿತಾ(21) ಹಾಗೂ ರಮೇಶ್ ರೈ(55) ಎಂಬವರನ್ನು ಕೊಂದು ಹಾಕಿದೆ.