'ಕೌಟುಂಬಿಕ ಕಾರಣ'ದಿಂದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮಧ್ಯದಲ್ಲೇ ಆಸ್ಟ್ರೇಲಿಯಕ್ಕೆ ಮರಳಿದ ಪ್ಯಾಟ್ ಕಮಿನ್ಸ್

ಹೊಸದಿಲ್ಲಿ: ಭಾರತ ವಿರುದ್ಧ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮಧ್ಯದಲ್ಲಿ ಆಸ್ಟ್ರೇಲಿಯದ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ತವರಿಗೆ ಮರಳಿದ್ದಾರೆ.
ವೇಗದ ಬೌಲಿಂಗ್ ಆಲ್‌ರೌಂಡರ್ ''ಕೌಟುಂಬಿಕ ಕಾರಣ"ದಿಂದಾಗಿ ರವಿವಾರ ಸಿಡ್ನಿ ವಿಮಾನವನ್ನು ಏರಿದರು ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ.
ಆದಾಗ್ಯೂ, ಮಾರ್ಚ್ 1 ರಿಂದ ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ನಾಲ್ಕು ಪಂದ್ಯಗಳ ಸರಣಿಯ ಮೂರನೇ ಟೆಸ್ಟ್‌ಗೆ ಮೊದಲು ಕಮಿನ್ಸ್ ಮರಳುವ ನಿರೀಕ್ಷೆಯಿದೆ ಎಂದು ಆಸ್ಟ್ರೇಲಿಯದ ಕ್ರಿಕೆಟ್ ಸಂಸ್ಥೆ ಹೇಳಿದೆ.
ಟೆಸ್ಟ್ ಸರಣಿಯ ನಂತರ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮಾರ್ಚ್ 17 ರಿಂದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆ.
"ಕಮಿನ್ಸ್ ಕುಟುಂಬದಲ್ಲಿನ ಗಂಭೀರ ಅನಾರೋಗ್ಯದ ಕಾರಣ ವೈಯಕ್ತಿಕ ಕಾರಣಗಳಿಗಾಗಿ ಅವರು ಮನೆಗೆ ತೆರಳಿದ್ದಾರೆ" ಎಂದು ಕ್ರಿಕೆಟ್ ಆಸ್ಟ್ರೇಲಿಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
"ಕಮಿನ್ಸ್ ಅವರು ಈ ವಾರದ ಕೊನೆಯಲ್ಲಿ ಇಂದೋರ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ಗೆ ಪುನಃ ಸೇರಲು ಭಾರತಕ್ಕೆ ಹಿಂತಿರುಗುತ್ತಾರೆ. ಅವರ ಗೌಪ್ಯತೆಯನ್ನು ಗೌರವಿಸುವಂತೆ ನಾವು ಮಾಧ್ಯಮಗಳನ್ನು ಕೇಳುತ್ತೇವೆ’’ ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ.







