ಡ್ರೋನ್ ಸರ್ವೆ ಅಕ್ರಮ: ಸಚಿವ ಆರ್.ಅಶೋಕ್ ವಿರುದ್ಧ ತನಿಖೆಗೆ ಆಪ್ ಒತ್ತಾಯ
ಬೆಂಗಳೂರು, ಫೆ.20: ಡ್ರೋನ್ ಸರ್ವೆ ಕಾರ್ಯದಲ್ಲಿ ಅಕ್ರಮವಾಗಿದೆಯೆಂದು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮಾಡಿರುವ ಆರೋಪಗಳಿಗೆ ಸಂಬಂಧಿಸಿ ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಸೂಕ್ತ ತನಿಖೆಯಾಗಬೇಕು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಆಗ್ರಹಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದಿರುವ 423 ಕೋಟಿ ರೂ.ಮೊತ್ತದ ಡ್ರೋನ್ ಸರ್ವೆ ಯೋಜನೆಯಲ್ಲಿ ಅಕ್ರಮ ನಡೆದಿದೆ. ತಮಗೆ ಬೇಕಾದ ರೀತಿಯಲ್ಲಿ ಟೆಂಡರ್ ಮಾರ್ಗಸೂಚಿಗಳನ್ನು ರೂಪಿಸಿಕೊಂಡು, ತಮಗೆ ಬೇಕಾದವರಿಗೆ ಟೆಂಡರ್ ನೀಡುತ್ತಿದ್ದಾರೆ. 5000 ಚದರ ಕಿಲೋಮೀಟರ್ ವ್ಯಾಪ್ತಿಯನ್ನು 1000 ಚದರ ಕಿಲೋಮೀಟರ್‍ಗೆ ಇಳಿಕೆ ಮಾಡಿದ್ದಾರೆ. ಗುತ್ತಿಗೆಯನ್ನು ತುಂಡುಗುತ್ತಿಗೆಯಾಗಿ ಮಾರ್ಪಾಡು ಮಾಡಿ, 1.5 ಕೋಟಿ ರೂಪಾಯಿಯಿಂದ 8 ಕೋಟಿ ರೂಪಾಯಿ ಮೊತ್ತದ ಟೆಂಡರ್‍ಗಳನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದರು.
ಆರ್ಥಿಕ ಇಲಾಖೆಯ ಗಮನಕ್ಕೆ ತರಬೇಕೆಂಬ ನಿಯಮವನ್ನು ಗಾಳಿಗೆ ತೂರಿದ್ದಾರೆ. ರೂಪಾ ಮೌದ್ಗಿಲ್‍ಮಾಡಿರುವ ಆ ಆರೋಪಗಳನ್ನು ಗಮನಿಸಿದರೆ ಭಾರಿ ಪ್ರಮಾಣದ ಕಿಕ್‍ಬ್ಯಾಕ್ ಪಡೆದಿರುವ ಸಂಶಯ ವ್ಯಕ್ತವಾಗುತ್ತಿದೆ. ಇದರಲ್ಲಿ ಸಚಿವ ಆರ್.ಅಶೋಕ್, ಐಎಎಸ್ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಹಾಗೂ ಮೌನೀಶ್ ಮೌದ್ಗಿಲ್ ಪಾತ್ರದ ಕುರಿತು ಸೂಕ್ತ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.
ಡ್ರೋನ್ ಸರ್ವೇ ಮಾಡಿಸಲು ಎರಡನೇ ಹಂತದಲ್ಲಿ ಟೆಂಡರ್ ಕರೆಯಲು ಸಿದ್ಧತೆ ನಡೆಸಿಕೊಂಡಿರುವ ಮೌನೀಶ್‍ರವರು ಆರವ್ ಎನ್ನುವ ಸಂಸ್ಥೆಗೆ ಸಹಾಯ ಮಾಡಲು ಮಾರ್ಗಸೂಚಿಗಳನ್ನು ಬದಲಾಯಿಸಿದ್ದಾರೆ. ಈ ಹಿಂದಿನ ಗುತ್ತಿಗೆಗಳಿಗೆ ಗುತ್ತಿಗೆದಾರರಾಗಿದ್ದ ಸಂಸ್ಥೆಗಳಿಗೆ ಈ ಆರವ್ ಸಂಸ್ಥೆಯು ಸಬ್ ಕಂಟ್ರ್ಯಾಕ್ಟರ್ ಆಗಿತ್ತು. ಆದರೆ ಈಗ ಪ್ರಮುಖ ಸಂಸ್ಥೆಗಳಿಗೆ ಟೆಂಟರ್ ಸಿಗದಂತೆ ಮಾರ್ಗಸೂಚಿಗಳನ್ನು ರೂಪಿಸುವ ಮೂಲಕ ಅಕ್ರಮ ನಡೆಸಿದ್ದಾರೆ. ಮೌನೀಶ್‍ರವರ ಪತ್ನಿಯಾಗಿರುವ ರೂಪಾ ಮೌದ್ಗೀಲ್‍ರವರೇ ಈ ವಿಷಯವನ್ನು ಬಹಿರಂಗಪಡಿಸಿದ್ದು, ತಕ್ಷಣವೇ ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಜಗದೀಶ್ ವಿ ಸದಂ ಆಗ್ರಹಿಸಿದರು.