ಬಿಜೆಪಿ ಆಳ್ವಿಕೆಯಲ್ಲಿ ಗ್ರಾಮೀಣ ಭಾಗದ ಜನರ ಸಬಲೀಕರಣ: ಜೆ.ಪಿ. ನಡ್ಡಾ
ಉಡುಪಿ ಜಿಲ್ಲಾ ಬೂತ್ ಕಾರ್ಯಕರ್ತರ ಸಮಾವೇಶ

ಉಡುಪಿ: ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರದ 9 ವರ್ಷಗಳ ಆಡಳಿತ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರಕಾರದ ಆಳ್ವಿಕೆಯಲ್ಲಿ ಗರೀಬಿ ಕಲ್ಯಾಣ್ ಯೋಜನೆಯಡಿ ಗ್ರಾಮೀಣ ಭಾಗದ ದಲಿತರು, ಹಿಂದುಳಿದವರು, ಬಡವರು ಹಾಗೂ ಮಹಿಳೆಯರು ಸೇರಿದಂತೆ ಎಲ್ಲಾ ವರ್ಗಗಳ ಜನರ ಸಬಲೀಕರಣ ನಡೆದಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ಉಡುಪಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಸೋಮವಾರ ನಗರದ ಎಂಜಿಎಂ ಕಾಲೇಜು ಮೈದಾನದಲ್ಲಿ ಆಯೋಜಿಸಲಾದ ಜಿಲ್ಲಾ ಬೂತ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬಿಜೆಪಿ ಪಕ್ಷವು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ದೃಷ್ಟಿಕೋನದಿಂದ ಕೆಲಸ ಮಾಡುತ್ತಿದೆ. ಬೂತ್ ಮಟ್ಟದ ಕಾರ್ಯಕರ್ತರು ವಿಶೇಷ ಪರಿಶ್ರಮದಿಂದ ತಳಮಟ್ಟದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿಶೇಷ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ದೇಶದಲ್ಲಿ 3.50 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 9 ಲಕ್ಷ ಮನೆಗಳು ಕರ್ನಾಟಕದಲ್ಲಿ ನಿರ್ಮಾಣಗೊಂಡಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಕೊಳೆಗೇರಿಗಳ ಸಂಖ್ಯೆ ಕಡಿಮೆಯಾಗಿದೆ. ದೇಶದ ಆರ್ಥಿಕತೆ ವಿಶೇಷ ಬಲಬಂದಿದೆ. ರಾಜ್ಯದ ಬಿಜೆಪಿ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಹೆಚ್ಚಿಸಿದೆ. ರೈತ ಮಕ್ಕಳಿಗೆ ಘೋಷಿಸಿದ ವಿದ್ಯಾಸಿರಿ ಯೋಜನೆಯ ವ್ಯಾಪ್ತಿಗೆ ಮೀನುಗಾರ ಹಾಗೂ ನೇಕಾರರ ಮಕ್ಕಳನ್ನೂ ತರಲಾಗಿದೆ. ಇದರಿಂದ ಲಕ್ಷಾಂತರ ಮಕ್ಕಳಿಗೆ ಪ್ರಯೋಜನವಾಗಿದೆಎಂದು ಜೆ.ಪಿ.ನಡ್ಡಾ ವಿವರಿಸಿದರು.
ಕಾಂಗ್ರೆಸ್ ಪಕ್ಷವೂ ಸೇರಿದಂತೆ ಇಂದು ಎಲ್ಲಾ ಪಕ್ಷಗಳೂ ಕೌಟುಂಬಿಕ ಪಕ್ಷಗಳಾಗಿವೆ. ಸಮಾಜವಾದಿ ಪಕ್ಷ, ಆರ್‌ಜೆಡಿ, ಶಿವಸೇನಾ, ಟಿಆರ್‌ಎಸ್ಸ್, ಮಮತಾ, ಡಿಎಂಕೆ ಹೀಗೆ ಪ್ರಾದೇಶಿಕ ಪಕ್ಷಗಳೆಲ್ಲವೂ ಪರಿವಾರದ ಪಕ್ಷಗಳಾಗಿವೆ. ಆದರೆ ಬಿಜೆಪಿ ಪಕ್ಷ ಮಾತ್ರ ಸಕ್ರೀಯವಾಗಿ ಸೈದ್ಧಾಂತಿಕ ವಿಚಾರಧಾರೆಯ, ಬಡಜನರ ಕಷ್ಟಸುಖಗಳಿಗೆ ಒದಗುವ ಪಕ್ಷವಾಗಿದೆ ಎಂದರು.
ಬಿಜೆಪಿ ಈಗಲೂ ಕಾರ್ಯಕರ್ತರ ಪಕ್ಷವಾಗುಳಿದಿದೆ. ಇಲ್ಲಿ ಇಡೀ ಪಕ್ಷವೇ ಒಂದು ಕುಟುಂಬವಾಗಿದೆ. ಹೀಗಾಗಿ ಪ್ರತಿಯೊಬ್ಬ ಕಾರ್ಯಕರ್ತನಿಗೂ ಪಕ್ಷದ ಸದಸ್ಯನಾಗಿರುವ ಬಗ್ಗೆ ಹೆಮ್ಮೆ ಇದೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಗುರುತರ ಹೊಣೆ ಪ್ರತಿ ಕಾರ್ಯಕರ್ತನ ಮೇಲಿದೆ ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯದ ಸಚಿವರಾದ ವಿ.ಸುನಿಲ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ , ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, ಯಶ್ಪಾಲ್ ಸುವರ್ಣ, ಸುಮಿತ್ರಾ ಆರ್.ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿ, ಮನೋಹರ ಕಲ್ಮಾಡಿ ವಂದಿಸಿದರು. ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

