ರಾಜಕೀಯವಾಗಿ ಕಾಂಗ್ರೆಸ್‌ನ್ನು ‘ಸ್ಮಶಾನ’ಕ್ಕೆ ಕಳುಹಿಸಿ: ಸಿ.ಟಿ.ರವಿ

ಉಡುಪಿ: ಹಿಂದು ಧರ್ಮ ನಮ್ಮ ದೇಹವಾದರೆ, ಹಿಂದುತ್ವ ಅದರ ಜೀವ. ಹಿಂದುತ್ವವನ್ನು ಒಪ್ಪದ ಕಾಂಗ್ರೆಸ್, ಜೀವವಿಲ್ಲದ ಶವದಂತೆ. ಶವವನ್ನು ಹೆಚ್ಚು ಹೊತ್ತು ಊರಿನಲ್ಲಿ ಇಟ್ಟುಕೊಳ್ಳುವಂತಿಲ್ಲ. ಹೀಗಾಗಿ ರಾಜಕೀಯವಾಗಿ ಕಾಂಗ್ರೆಸ್‌ನ್ನು ಸ್ಮಶಾನಕ್ಕೆ ಕಳುಹಿಸಿಕೊಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾದ ಜಿಲ್ಲಾ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ ಅವರು ಈ ಮಾತು ಹೇಳಿದರು.
ಚುನಾವಣೆ ಬಂದಾಗ ಕಾಂಗ್ರೆಸಿನ ಕೆಲವರಿಗೆ ಹಿಂದು ಬಗ್ಗೆ ಪ್ರೀತಿ ಉಕ್ಕುತ್ತೆ. ಅದುವರೆಗೆ ಒಂದು ಧರ್ಮದ ತುಷ್ಟೀಕರಣದಲ್ಲಿ ತೊಡಗಿರುವ ಅವರು ತಾನೂ ಒಬ್ಬ ಹಿಂದು ಎಂದು ಘೋಷಿಸಿಕೊಳ್ಳುತ್ತಾರೆ. ಆದರೆ ಹಿಂದುತ್ವವನ್ನು ನಾನು ಒಪ್ಪುವುದಿಲ್ಲ ಎನ್ನುತ್ತಾರೆ. ನಮ್ಮ ಪ್ರಕಾರ ಹಿಂದು ಎಂಬುದು ದೇಹವಾದರೆ, ಹಿಂದುತ್ವ ಅದರ ಜೀವ. ಹಿಂದುತ್ವವೇ ಇಲ್ಲದ ದೇಹ ಕೇವಲ ಒಂದು ಶವ. ಅದಕ್ಕೆ ಸಂಸ್ಕಾರವಾಗಬೇಕು ಎಂದರು.
ಆದುದರಿಂದ ರಾಜಕೀಯವಾಗಿ ಕಾಂಗ್ರೆಸ್‌ನ್ನು ಸ್ಮಶಾನಕ್ಕೆ ಕಳುಹಿಸಿಕೊಡಿ. ಅದಕ್ಕೆ ಚೆಂಡಿನ (ಹೂವಿನ) ಅಗತ್ಯವಿಲ್ಲ. ಏಕೆಂದರೆ ಈಗಾಗಲೇ ಅವರೇ ಕಿವಿಗೆ ಹೂವಿಟ್ಟುಕೊಂಡಿದ್ದಾರೆ. ಹೀಗಾಗಿ ಯಾರೂ ಹೂವನ್ನು ತರಬೇಕಿಲ್ಲ. ಈಗಾಗಲೇ ದಂಡ-ಪಿಂಡಗಳಂತೆ ತಿಂದು ಬಿಟ್ಟಿರುವುದರಿಂದ ಪಿಂಡ ಹಾಕುವ ಅಗತ್ಯವೂ, ಜವಾಬ್ದಾರಿಯೂ ನಮಗಿಲ್ಲ ಎಂದರು.
ಮುಂದಿನ ಚುನಾವಣೆಯಲ್ಲಿ ಪ್ರತಿ ಬೂತಿನಲ್ಲಿ ಒಂದೇ ಒಂದು ಮತ ಕಾಂಗ್ರೆಸ್‌ಗೆ ಬೀಳದಂತೆ ನೋಡಿಕೊಳ್ಳಿ ಎಂದು ಬೂತ್ ಕಾರ್ಯಕರ್ತರಿಗೆ ಕರೆ ನೀಡಿದರು.
ನಿರುದ್ಯೋಗಿಗಳಾಗುವ ವಿರೋಧ ಪಕ್ಷ: ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆದ್ದೇ ಗೆಲ್ಲಲಿದೆ. ರಾಜ್ಯದಲ್ಲಿ ಮತ್ತೊಮ್ಮೆ ಪೂರ್ಣಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಇದರಿಂದ ಮುಖ್ಯಮಂತ್ರಿ ಸ್ಥಾನಕ್ಕಾಗಿ ಡ್ರೆಸ್ ಹೊಲಿಸಿಕೊಂಡು ಕಾಯುತ್ತಿರುವ ವಿರೋಧ ಪಕ್ಷಗಳ ನಾಯಕರು ಮತ್ತೊಮ್ಮೆ ನಿರುದ್ಯೋಗಿ ಗಳಾಗಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದುವರೆಗೆ ದೇಶದ ಯಾವುದೇ ಪಕ್ಷದಲ್ಲಿ ಮೂಲೆಯ ಬೂತ್ ಕಾರ್ಯಕರ್ತನೊಂದಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಬಂದು ಮಾತನಾಡಿದ ಉದಾಹರಣೆಯೇ ಇಲ್ಲ. ಆದರೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಇಂದು ಉಡುಪಿಗೆ ಬಂದು ಜಿಲ್ಲೆಯ 1111 ಬೂತ್‌ಗಳ ಅಧ್ಯಕ್ಷರು ಹಾಗೂ ಕಾರ್ಯಕರ್ತರೊಂದಿಗೆ ಮಾತನಾಡಿದ್ದಾರೆ ಎಂದರು.