ಸೈಬರ್ ಪ್ರಕರಣ ಪತ್ತೆಗೆ 45 ಠಾಣೆ ಆರಂಭ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು, ಫೆ.20: ರಾಜ್ಯದಲ್ಲಿ ಸೈಬರ್ ಪ್ರಕರಣಗಳನ್ನು ಹತ್ತಿಕ್ಕುವ ಸಲುವಾಗಿ 45 ಸೈಬರ್ ಠಾಣೆಗಳನ್ನು ಆರಂಭಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸೋಮವಾರ ವಿಧಾನ ಪರಿಷತ್‍ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರತಿ ಜಿಲ್ಲೆ ಒಂದರಂತೆ ಸೈಬರ್ ಪೊಲೀಸ್ ಠಾಣೆಗಳನ್ನು ತೆರೆದು ಸೈಬರ್ ಅಪರಾಧ ಮತ್ತು ವಂಚನೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಜತೆಗೆ ಜನರಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸೈಬರ್ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಆರ್‍ಬಿಐ, ಪೊಲೀಸ್ ಮತ್ತು ಬ್ಯಾಂಕ್ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದರು.
ಇದು ಒಬ್ಬ ವ್ಯಕ್ತಿಗೆ ಕನಿಷ್ಠ 9 ಸಿಮ್‍ಗಳನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಈ ಸಿಮ್‍ಗಳಿಗೆ ಆಧಾರ್ ಸಂಖ್ಯೆ ಜೋಡಿಸುವುದು ಕೇಂದ್ರ ಸರಕಾರದ ಕರ್ತವ್ಯ. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಜತೆ ಸಮಾಲೋಚನೆ ನಡೆಸುತ್ತಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಅಪರಾಧಗಳ ರೀತಿ ನೀತಿ ಬದಲಾಗಿದೆ. ಹೆದ್ದಾರಿ, ಮನೆ ದರೋಡೆ ಬದಲಾಗಿ ಸೈಬರ್ ಕ್ರಿಮಿನಲ್‍ಗಳು ವಿಚಿತ್ರ ರೀತಿಯಲ್ಲಿ ದರೋಡೆ ಮಾಡುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಬೆಳೆದಂತೆಲ್ಲಾ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಬುದ್ಧಿವಂತರೇ ದರೋಡೆ ಮಾಡುತ್ತಿರುವುದು ವಿಷಾದಕರ ಎಂದರು.
ಬೆಂಗಳೂರಿನ ಸಿಐಡಿ ಕೇಂದ್ರದಲ್ಲಿರುವ ಸೈಬರ್ ಕೇಂದ್ರ ವಿಭಾಗದ ಕಾರ್ಯನಿರ್ವಹಣೆಗೆ ದೇಶದ ವಿವಿಧ ಭಾಗಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು. ಆನ್‍ಲೈನ್ ವಂಚನೆ ನಡೆದ 2 ಗಂಟೆಯಲ್ಲಿ ಸಂಬಂಧಿಸಿದವರು ಬ್ಯಾಂಕ್‍ಗೆ ಮಾಹಿತಿ ನೀಡಿದರೆ ಬ್ಯಾಂಕ್ ಅಕೌಂಟ್ ಖಾತೆಯನ್ನು ಸೀಸ್ ಮಾಡುವುದು ಸೇರಿದಂತೆ ಹಲವು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.







