ಚರ್ಚ್‌ಗಳ ಮೇಲೆ ದಾಳಿ ವಿರೋಧಿಸಿ ದಿಲ್ಲಿಯಲ್ಲಿ ಕ್ರೈಸ್ತ ಗುಂಪುಗಳ ಪ್ರತಿಭಟನೆ

ಹೊಸದಿಲ್ಲಿ,ಫೆ.20: ದೇಶದ ವಿವಿಧ ಭಾಗಗಳಲ್ಲಿ ಚರ್ಚ್‌ಗಳ ಮೇಲೆ ದಾಳಿಯನ್ನು ವಿರೋಧಿಸಿ ಕ್ರೈಸ್ತ ಸಮುದಾಯದ ಸದಸ್ಯರು ರವಿವಾರ ದಿಲ್ಲಿಯ ಜಂತರ್ ಮಂತರ್(Jantar Mantar)ನಲ್ಲಿ ಪ್ರತಿಭಟನೆ ನಡೆಸಿದರು. ಸುಮಾರು ನೂರು ಚರ್ಚ್‌ಗಳು ಮತ್ತು ಕ್ರೈಸ್ತ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
‘ನಮ್ಮ ವಿರುದ್ಧ ಜನರನ್ನು ಬಲವಂತದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿರುವ ಆರೋಪಗಳನ್ನು ಮಾಡಲಾಗುತ್ತಿದೆ. ಚರ್ಚ್‌ಗಳ ಮೇಲೆ ದಾಳಿಗಳನ್ನು ನಡೆಸಲಾಗುತ್ತಿದೆ,ನಮ್ಮ ಜನರನ್ನು ಥಳಿಸಲಾಗುತ್ತಿದೆ ಮತ್ತು ಬಂಧಿಸಲಾಗುತ್ತಿದೆ. ಸಮುದಾಯದ ಜನರು ನಿರಂತರವಾಗಿ ಭಯದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ’ ಎಂದು ಉತ್ತರ ಪ್ರದೇಶದ ನಿವಾಸಿ ಸ್ಟೀವನ್ ದೂರಿದರು.
ಆರು ದಿನಗಳ ಹಿಂದೆ ಮಧ್ಯಪ್ರದೇಶದ ನರ್ಮದಾಪುರಂ ಎಂಬಲ್ಲಿ ಚರ್ಚ್‌ವೊಂದನ್ನು ಧ್ವಂಸಗೊಳಿಸಿದ್ದ ದುಷ್ಕರ್ಮಿಗಳು ಅದಕ್ಕೆ ಬೆಂಕಿ ಹಚ್ಚಿದ್ದರು. ಅದಕ್ಕೂ ಮುನ್ನ ಜ.2ರಂದು ಛತ್ತೀಸ್‌ಗಡದ ನಾರಾಯಣಪುರ ಜಿಲ್ಲೆಯಲ್ಲಿ ಚರ್ಚ್‌ನ್ನು ಧ್ವಂಸಗೊಳಿಸಿದ್ದ ಗುಂಪು ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿತ್ತು. ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಓರ್ವ ನಾಯಕ ಸೇರಿದಂತೆ ಐವರನ್ನು ಬಂಧಿಸಲಾಗಿತ್ತು.
ಕ್ರೈಸ್ತರ ವಿರುದ್ಧ ‘ಉದ್ದೇಶಿತ ಹಿಂಸಾಚಾರ ’ದ ಸಮಸ್ಯೆಯನ್ನು ಬಗೆಹರಿಸಲು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ರಾಷ್ಟ್ರೀಯ ಪರಿಹಾರ ಆಯೋಗವನ್ನು ರಚಿಸುವಂತೆ ಒತ್ತಾಯಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಹವಾಲನ್ನು ಸಲ್ಲಿಸುವುದಾಗಿ ಕ್ರೈಸ್ತ ಸಮುದಾಯದ ಸದಸ್ಯರು ರವಿವಾರ ತಿಳಿಸಿದರು.
ದಿಲ್ಲಿಯ ಮಾನವ ಹಕ್ಕುಗಳ ಗುಂಪು ದಿ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಕಳೆದ ವರ್ಷ 21 ರಾಜ್ಯಗಳಲ್ಲಿ ಕ್ರೈಸ್ತರ ವಿರುದ್ಧ ಹಿಂಸಾಚಾರದ 598 ಘಟನೆಗಳನ್ನು ದಾಖಲಿಸಿತ್ತು.







