ಮಂಗಳೂರು: ಪಾಸ್ ಪುಸ್ತಕ ಖಾತೆದಾರರ ಮನೆಗೆ ತಲುಪಿಸಲು ಅಂಚೆ ಇಲಾಖೆ ನಿರ್ಧಾರ

ಮಂಗಳೂರು: ಹೊಸದಾಗಿ ಪಾಸ್ ಪುಸ್ತಕ ತೆರೆದ ಖಾತೆದಾರರ ಮನೆಗೆ ಪಾಸ್ ಪುಸ್ತಕವನ್ನು ತಲುಪಿಸಲು ಅಂಚೆ ಇಲಾಖೆಯ ಮಂಗಳೂರು ವಿಭಾಗ ನಿರ್ಧರಿಸಿದೆ.
ಅಂಚೆ ಇಲಾಖೆಯ ನಿಯಮಾವಳಿಯಂತೆ ಗ್ರಾಹಕರು ತೆರೆದ ಹೊಸ ಖಾತೆಯ ಪಾಸ್ ಪುಸ್ತಕವನ್ನು ಖಾತೆ ತೆರೆದ ದಿನವೇ ಅವರಿಗೆ ನೀಡಬೇಕು. ಆದರೆ ಕೆಲವೊಮ್ಮೆ ಸರ್ವರ್ ಸಮಸ್ಯೆ, ತಾಂತ್ರಿಕ ಸಮಸ್ಯೆಯ ಕಾರಣದಿಂದ ಆ ದಿನ ಪಾಸ್ ಪುಸ್ತಕವನ್ನು ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅದನ್ನು ಪಡೆಯಲು ಖಾತೆದಾರರು ಪುನ: ಅಂಚೆ ಕಚೇರಿಗೆ ಬರಬೇಕಾಗುತ್ತದೆ. ಅದನ್ನು ತಪ್ಪಿಸುವ ಸಲುವಾಗಿ ಅಂಚೆ ಇಲಾಖೆಯ ಮಂಗಳೂರು ವಿಭಾಗವು ಮನೆ ಬಾಗಿಲಿಗೆ ಪಾಸ್ ಪುಸ್ತಕವನ್ನು ನೂತನ ವ್ಯವಸ್ಥೆಯೊಂದನ್ನು ಜಾರಿಗೊಳಿಸುತ್ತಿದೆ.
ಇನ್ಮುಂದೆ ಅಂಚೆ ಕಚೇರಿಗಳಲ್ಲಿ ಗ್ರಾಹಕರು ಹೊಸ ಖಾತೆಗಳನ್ನು ತೆರೆದಾಗ ಪಾಸ್ ಪುಸ್ತಕಗಳನ್ನು ಖಾತೆ ತೆರೆದ ದಿನವೇ ನೀಡಲು ಸಾಧ್ಯವಾಗದಿದ್ದರೆ ಒಂದು ಅರ್ಜಿ ಫಾರಂ ನೀಡಲಾಗುತ್ತದೆ. ಇದನ್ನು ತುಂಬಿಸಿ ಅಂಚೆ ಕಚೇರಿಗೆ ನೀಡಿದಾಗ ಪಾಸ್ ಪುಸ್ತಕಗಳನ್ನು ಮನೆ ಬಾಗಿಲಿಗೆ ಸೇವಾ ರೆಜಿಸ್ಟರ್ಡ್ ಅಂಚೆಯ ಮೂಲಕ ತಲುಪಿಸಲಾಗುತ್ತದೆ. ಖಾತೆದಾರರು ಯಾವ ವಿಳಾಸಕ್ಕೆ ಪಾಸ್ ಪುಸ್ತಕ ಬೇಕೆಂದು ಈ ಫಾರಂನಲ್ಲಿ ತಿಳಿಸಬೇಕು ಮತ್ತು ಅದೇ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಇದರಿಂದ ಗ್ರಾಹಕರಿಗೆ ಸಮಯ ಹಾಗೂ ಪ್ರಯಾಣದ ವೆಚ್ಚದ ಉಳಿತಾಯವಾಗುತ್ತದೆ ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಪ್ರಕಟನೆ ತಿಳಿಸಿದೆ.







