ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರಕಾರ ಆದೇಶ

ಬೆಂಗಳೂರು, ಫೆ. 20: ಗಾಣಿಗ ಸಮುದಾಯಕ್ಕೆ ಅನುಕೂಲವಾಗುವಂತೆ ‘ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ'ವನ್ನು ಸ್ಥಾಪಿಸಿ ರಾಜ್ಯ ಸರಕಾರ ಸೋಮವಾರ ಅಧಿಕೃತ ಆದೇಶವನ್ನು ಹೊರಡಿಸಿದೆ.
ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಕ್ರಮಸಂಖ್ಯೆ 78(ಎ)ಯಿಂದ (ಇ)ವರೆಗೆ ಬರುವ ಗಾಣಿಗ, ತೇಲಿ, ಗಾಂಡ್ಲ, ವನಿಯನ್ ಹಾಗೂ ಜ್ಯೋತಿನಗರ, ಜ್ಯೋತಿನಗರ ವೈಶ್ಯ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆದೇಶಿಸಲಾಗಿದೆ.
ಇನ್ನು ಗಾಣಿಗ ಸಮುದಾಯದ ಅಭಿವೃದ್ಧಿಗೆ ಹಲವು ವರ್ಷಗಳಿಂದ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಸರಕಾರದ ಮೇಲೆ ಒತ್ತಡ ಹೇರಲಾಗಿತ್ತು. ಆದರೆ, ಹಲವು ವರ್ಷಗಳಿಂದ ಸರಕಾರ ಬೇಡಿಕೆಯನ್ನು ಈಡೇರಿಸಿರಲಿಲ್ಲ. ಈಗ ಚುನಾವಣೆಗೆ ಮುರ್ನಾಲ್ಕು ತಿಂಗಳುಗಳಷ್ಟೇ ಬಾಕಿಯಿರುವ ಹಿನ್ನೆಲೆ ರಾಜ್ಯದ ಸುಮಾರು 45 ಲಕ್ಷ ಗಾಣಿಗ ಸಮುದಾಯದ ಜನಸಂಖ್ಯೆಯ ಮತಗಳನ್ನು ಸೆಳೆಯಲು ಬಿಜೆಪಿ ಸರಕಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶಿಸಿದೆ ಎಂದು ಹಲವು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.





