ರಶ್ಯಕ್ಕೆ ಶಸ್ತ್ರಾಸ್ತ್ರ ಪೂರೈಸಿ ಕೆಂಪುಗೆರೆ ದಾಟದಿರಿ: ಚೀನಾಕ್ಕೆ ಇಯು ಎಚ್ಚರಿಕೆ

ಬ್ರಸೆಲ್ಸ್, ಫೆ.20: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯಕ್ಕೆ ಶಸ್ತ್ರಾಸ್ತ್ರ ಪೂರೈಸಬಾರದು ಎಂದು ಯುರೋಪಿಯನ್ ಯೂನಿಯನ್(EU) ಚೀನಾಕ್ಕೆ ಸಲಹೆ ನೀಡಿದ್ದು, ಶಸ್ತ್ರಾಸ್ತ್ರ ಪೂರೈಸಿದರೆ ದ್ವಿಪಕ್ಷೀಯ ಸಂಬಂಧದ ಕೆಂಪುಗೆರೆ ದಾಟಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಜರ್ಮನಿಯ ಮ್ಯೂನಿಚ್ ನಲ್ಲಿ ನಡೆಯುತ್ತಿರುವ 39ನೇ ಮ್ಯೂನಿಚ್ ಭದ್ರತಾ ಸಮಾವೇಶದ ನೇಪಥ್ಯದಲ್ಲಿ ಚೀನಾದ ಉನ್ನತ ರಾಜತಾಂತ್ರಿಕ ಅಧಿಕಾರಿ ವಾಂಗ್ ಯಿ (Wang Yi)ಜತೆ ಮಾತುಕತೆ ನಡೆಸಿದ ಸಂದರ್ಭ ಯುರೋಪಿಯನ್ ಯೂನಿಯನ್ ನ ವಿದೇಶಾಂಗ ಕಾರ್ಯನೀತಿ ವಿಭಾಗದ ಮುಖ್ಯಸ್ಥ ಜೋಸೆಫ್ ಬೋರೆಲ್(Joseph Borrell), `ರಶ್ಯಕ್ಕೆ ಶಸ್ತ್ರಾಸ್ತ್ರ ಒದಗಿಸಲು ಚೀನಾ ನಿರ್ಧರಿಸಿದೆ' ಎಂಬ ವರದಿ ಬಗ್ಗೆ ಪ್ರಸ್ತಾವಿಸಿದರು ಎಂದು ಇಯು ಉನ್ನತ ಮೂಲಗಳು ಹೇಳಿವೆ. `ರಶ್ಯಕ್ಕೆ ಶಸ್ತ್ರಾಸ್ತ್ರ ಒದಗಿಸುವ ಬಗ್ಗೆ ಚೀನಾ ಯೋಚಿಸಿಲ್ಲ ಎಂದು ವಾಂಗ್ಯಿ ದೃಢಪಡಿಸಿದ್ದಾರೆ. ಆದರೂ ನಾವು ಜಾಗರೂಕರಾಗಿರುತ್ತೇವೆ' ಎಂದು ಸಭೆಯ ಬಳಿಕ ಬೋರೆಲ್ ಹೇಳಿದ್ದಾರೆ.
ಅಮೆರಿಕಕ್ಕೆ ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸುವ ಬಗ್ಗೆ ಚೀನಾ ಪರಿಶೀಲಿಸುತ್ತಿದೆ ಎಂದು ರವಿವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ, ಇದು ಅಮೆರಿಕದ ಕಪೋಲಕಲ್ಪಿತ ಹೇಳಿಕೆಯನ್ನು ಆಧರಿಸಿದ ವರದಿಯಾಗಿದ್ದು ಉಕ್ರೇನ್ ಯುದ್ಧದಲ್ಲಿ ರಶ್ಯಕ್ಕೆ ಶಸ್ತ್ರಾಸ್ತ್ರ ಪೂರೈಸುವ ಪ್ರಶ್ನೆಯೇ ಇಲ್ಲ. ಆದರೆ, ಉಕ್ರೇನ್ಗೆ ಶಸ್ತ್ರಾಸ್ತ್ರ ಪೂರೈಸುವ ಮೂಲಕ ಅಮೆರಿಕ ಸಂಘರ್ಷದ ಬೆಂಕಿಗೆ ತುಪ್ಪ ಸುರಿಯುತ್ತಿದೆ ಎಂದಿದೆ.
ಉಕ್ರೇನ್ ಯುದ್ಧ ಆರಂಭವಾದಂದಿನಿಂದಲೂ ಉಕ್ರೇನ್ ನ ಬೆಂಬಲಕ್ಕೆ ದೃಢವಾಗಿ ನಿಂತಿರುವ 27 ಸದಸ್ಯದೇಶಗಳ ಯುರೋಪಿಯನ್ ಒಕ್ಕೂಟ, ಉಕ್ರೇನ್ ಗೆ ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವು ಒದಗಿಸುತ್ತಿದೆ. ರಶ್ಯದ ಆಕ್ರಮಣವನ್ನು ಚೀನಾ ಇದುವರೆಗೆ ಖಂಡಿಸದಿರುವುದು ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ರಶ್ಯದ ಬೆಂಬಲಕ್ಕೆ ನಿಲ್ಲುತ್ತಿರುವುದು ವ್ಯಾಪಕ ಕಳವಳಕ್ಕೆ ಕಾರಣವಾಗಿದೆ. ಚೀನಾವು ರಶ್ಯಕ್ಕೆ ಶಸ್ತ್ರಾಸ್ತ್ರ ಪೂರೈಕೆ ಆರಂಭಿಸಿದರೆ ಖಂಡಿತವಾಗಿಯೂ ಪರಿಣಾಮ ಎದುರಿಸಬೇಕಾಗುತ್ತದೆ. ಆದರೂ ಇಂತಹ ಕೃತ್ಯಕ್ಕೆ ಚೀನಾ ಮುಂದಾದರೆ ಅಂತರಾಷ್ಟ್ರೀಯ ಸಮುದಾಯ ಖಂಡಿತ ಒಪ್ಪುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಚೀನಾಕ್ಕೆ ರವಾನಿಸಬೇಕಾಗಿದೆ ಎಂದು ಸ್ವೀಡನ್ ನ ವಿದೇಶಾಂಗ ಸಚಿವ ಟೊಬಿಯಾಸ್ ಬಿಲ್ಸ್ಟಾರ್ಮ್ ಹೇಳಿದ್ದಾರೆ.
ರಶ್ಯಕ್ಕೆ ಶಸ್ತ್ರಾಸ್ತ್ರ ಪೂರೈಸದಂತೆ ಎಚ್ಚರಿಕೆ ರವಾನಿಸಿರುವ ಜತೆಯಲ್ಲೇ, ಉಕ್ರೇನ್ ಗೆ ಪೂರೈಸಲು ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ತ್ವರಿತಗೊಳಿಸುವ ಪ್ರಸ್ತಾವನೆಯನ್ನೂ ಯುರೋಪಿಯನ್ ಯೂನಿಯನ್ ಪರಿಶೀಲಿಸುತ್ತಿದೆ. ಇದು ಅತ್ಯಂತ ತುರ್ತು ವಿಷಯವಾಗಿದ್ದು ಇದರಲ್ಲಿ ನಾವು ವಿಫಲವಾದರೆ ಯುದ್ಧದ ಫಲಿತಾಂಶ ಅಪಾಯಕಾರಿಯಾಗಬಹುದು ಎಂದು ಬೊರೆಲ್ ಹೇಳಿದ್ದಾರೆ. ಉಕ್ರೇನ್ ಗೆ 1 ದಶಲಕ್ಷ ಬಾಂಬ್ಗಳನ್ನು ಪೂರೈಸಲು ಯುರೋಪಿಯನ್ ಯೂನಿಯನ್ನ ಸದಸ್ಯರು ಒಟ್ಟಾಗಿ 4.3 ಶತಕೋಟಿ ಯುರೋಸ್ ಮೊತ್ತ ಸಂಗ್ರಹಿಸಬೇಕು ಎಂಬ ಪ್ರಸ್ತಾವನೆಯನ್ನು ಎಸ್ತೋನಿಯಾ ದೇಶ ಮುಂದಿರಿಸಿದೆ.
ಉಕ್ರೇನ್ ಈಗ ಒಂದು ತಿಂಗಳಲ್ಲಿ ಬಳಸುವ ಬಾಂಬ್ಗಳ ಪ್ರಮಾಣ ಯುರೋಪಿಯನ್ ಯೂನಿಯನ್ನ ರಕ್ಷಣಾ ಉದ್ಯಮ ಉತ್ಪಾದಿಸುವ ಬಾಂಬ್ಗಳ ಪ್ರಮಾಣಕ್ಕಿಂತ ಅಧಿಕವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.