ಶೈಕ್ಷಣಿಕ ಕಾರ್ಯಾಗಾರದಲ್ಲಿ ದಾಂಧಲೆಗೆ ವಿವಿಧ ಸಂಘಟನೆಗಳ ಖಂಡನೆ

ಮಂಗಳೂರು: ವಿಟ್ಲ ಸಮೀಪದ ಅಡ್ಯನಡ್ಕದ ಸರಕಾರೇತರ ಸಂಘ ಸಂಸ್ಥೆಯು ಸ್ಥಳೀಯ ವಿದ್ಯಾರ್ಥಿಗಳಿಗೆ ನಡೆಸಿದ ಶೈಕ್ಷಣಿಕ ಕಾರ್ಯಾಗಾರಕ್ಕೆ ಮುಸ್ಲಿಮೇತರ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ವಿರೋಧಿಸಿ ಸಂಘಪರಿವಾರದ ಕಾರ್ಯಕರ್ತರೆನ್ನಲಾದ ಯುವಕರು ನುಗ್ಗಿ ದಾಂಧಲೆ ನಡೆಸಿರುವುದು ಖಂಡನೀಯ ಎಂದು ಮಾಜಿ ಮೇಯರ್ ಕೆ.ಅಶ್ರಫ್, ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಾಗಾರ ನಡೆಸಿರುವುದೇ ಅನ್ಯಾಯ ಎಂಬಂತೆ ಆಯೋಜಕರು ಮತ್ತು ಸಂಪನ್ಮೂಲ ವ್ಯಕ್ತಿಗಳ ಮೇಲೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿರುವುದು ಅಕ್ಷಮ್ಯ. ಪೊಲೀಸರು ದಾಂಧಲೆ ನಡೆಸಿದ ಧಾಳಿ ಕೊರರ ವಿರುದ್ಧ ಪೊಲೀಸರು ಶಾಂತಿ ಭಂಗ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
*ಶೈಕ್ಷಣಿಕ ಕಾರ್ಯಗಾರದಲ್ಲಿ ಧಾರ್ಮಿಕ ಪ್ರವಚನ ಮಾಡಲಾಗಿದೆ ಎಂದು ಆರೋಪಿಸಿ ದಾಂಧಲೆ ನಡೆಸಿರುವುದು ಮತ್ತು ಕಲ್ಮಶ ರಹಿತ ವಿದ್ಯಾರ್ಥಿಗಳ ಮನದಲ್ಲಿ ಹಿಂದೂ ಮುಸ್ಲಿಂ ಎಂಬ ಭಾವನೆಯನ್ನು ಬಿತ್ತರಿಸಿ ಅವರ ಮನದಲ್ಲಿ ಭಯ ಹುಟ್ಟಿಸುವ ಪ್ರಯತ್ನ ಖಂಡನೀಯ. ರದ್ದುಗೊಳಿಸಿ ದಾಂಧಲೆ ನಡೆಸಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
*ಶೈಕ್ಷಣಿಕ ಕಾರ್ಯಾಗಾರದಲ್ಲಿ ಅಶಾಂತಿ ಸೃಷ್ಟಿಸಿರುವ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಲವು ವರ್ಷಗಳಿಂದ ಜಾತಿ, ಮತ ಭೇದವಿಲ್ಲದೆ ಮಕ್ಕಳಿಗೆ ಶೈಕ್ಷಣಿಕ ಕಾರ್ಯಾಗಾರ ನಡೆಸುತ್ತಾ ಬಂದಿರುವ ರಫೀಕ್ ಮಾಸ್ಟರ್‌ರ ಮೇಲೆ ಸುಳ್ಳಾರೋಪ ಹೊರಿಸಿ ಪ್ರಕರಣ ದಾಖಲಿಸಿದ್ದನ್ನು ಕೈಬಿಡಬೇಕು. ಈ ಪುಂಡಾಟಿಕೆಯಿಂದ ಮಕ್ಕಳ ಮನಸಿನ ಮೇಲೆ ಗಂಭೀರ ದುಷ್ಟರಿಣಾಮ ಬೀರುವ ಅಪಾಯ ಇರುವುದರಿಂದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಧ್ಯೆ ಪ್ರವೇಶಿಸಬೇಕು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯ ಕಾರ್ಯದರ್ಶಿ ಹಮೀದ್ ಬಜ್ಪೆ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
*ಇದು ಪೂರ್ವಯೋಜಿತ ಕೃತ್ಯವಾಗಿದೆ. ಸಮಾಜದಲ್ಲಿ ಎಲ್ಲಾ ಸಮುದಾಯದವರರು ಶೈಕ್ಷಣಿಕವಾಗಿ ಮುಂದು ವರಿಯ ಬೇಕು ಎಂಬ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಧಾರ್ಮಿಕ ಬೋಧನೆ ನಡೆಸಿದರೆಂದು ಸುಳ್ಳು ಆರೋಪ ಹೊರಿಸಿ ದಾಂಧಲೆ ನಡೆಸಿರುವುದು ಖಂಡನೀಯ. ಪೊಲೀಸರು ಸೂಕ್ತ ತನಿಖೆ ನಡೆಸಿ ದೂರು ದಾಖಲಿಸುವ ಬದಲು ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿರುವುದು ಪ್ರಶ್ನಾರ್ಹ. ಇದು ಸಮಾಜ ಘಾತುಕರಿಗೆ ಪ್ರೇರಣೆ ನೀಡಿದಂತಾಗಿದೆ.ದಾಂಧಲೆ ನಡೆಸಿದ ಮತೀಯ ಗೂಂಡಾಗಳನ್ನು ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ಎಸ್ಕೆಎಸೆಸ್ಸೆಫ್ ದ.ಕ. ವೆಸ್ಟ್ ಜಿಲ್ಲಾಧ್ಯಕ್ಷ ಸೈಯದ್ ಅಮೀರ್ ತಂಙಳ್ ಕಿನ್ಯ ಆಗ್ರಹಿಸಿದ್ದಾರೆ.







