ಒಂದು ದೇಶವಾಗಿ ಕಾರ್ಯನಿರ್ವಹಿಸಿ: ಪಾಕ್ ಗೆ ಐಎಂಎಫ್ ಸಲಹೆ

ಇಸ್ಲಮಾಬಾದ್, ಫೆ.20: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನವು ತನ್ನ ಹೆಚ್ಚಿನ ಆದಾಯದ ಜನರು ತೆರಿಗೆಯನ್ನು ಪಾವತಿಸುವಂತೆ ಮತ್ತು ಬಡವರು ಮಾತ್ರ ಸಬ್ಸಿಡಿಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಹೇಳಿದೆ.
ಜರ್ಮನಿಯ ಮ್ಯೂನಿಚ್ನಲ್ಲಿ ನಡೆಯುತ್ತಿರುವ 39ನೇ ಮ್ಯೂನಿಚ್ ಭದ್ರತಾ ಸಮಾವೇಶದ ನೇಪಥ್ಯದಲ್ಲಿ ಮಾಧ್ಯಮದ ಜತೆ ಮಾತನಾಡಿದ ಐಎಂಎಫ್ ಮುಖ್ಯಸ್ಥೆ ಕ್ರಿಸ್ತಲಿನಾ ಜಾರ್ಜಿಯೆವಾ, ಪಾಕಿಸ್ತಾನ ಒಂದು ದೇಶವಾಗಿ ಕಾರ್ಯನಿರ್ವಹಿಸಬೇಕು ಮತ್ತು ಸಾಲದ ಪುನರ್ರಚನೆ ಅಗತ್ಯ ಬೀಳುವ ಅಪಾಯಕಾರಿ ಸಂದರ್ಭ ಬಾರದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದರು. ಪಾಕಿಸ್ತಾನದ ಬಡಜನರನ್ನು ರಕ್ಷಿಸಬೇಕೆಂಬುದು ನಮ್ಮ ಸ್ಪಷ್ಟ ನಿಲುವಾಗಿದೆ. ಆದರೆ ಸಬ್ಸಿಡಿಗಳ ಪ್ರಯೋಜನವನ್ನು ಶ್ರೀಮಂತರು ಪಡೆಯಬೇಕು ಎಂಬುದು ಇದರರ್ಥವಲ್ಲ. ನಾವು ಎರಡು ವಿಷಯಗಳಿಗೆ ಒತ್ತುನೀಡುತ್ತಿದ್ದೇವೆ.
ಮೊದಲನೆಯದು ತೆರಿಗೆ ಆದಾಯ. ಸಾಧ್ಯವಿರುವವರು, ಸಾರ್ವಜನಿಕ ಅಥವಾ ಖಾಸಗಿ ವಲಯದಲ್ಲಿ ಉತ್ತಮ ಆದಾಯ ಗಳಿಸುವವರು ಆರ್ಥಿಕತೆಗೆ ಕೊಡುಗೆ ನೀಡಬೇಕಾಗುತ್ತದೆ. ಎರಡನೆಯದು ಅಗತ್ಯ ಇರುವವರಿಗೆ ಮಾತ್ರ ಸಬ್ಸಿಡಿಯ ಪ್ರಯೋಜನ ಲಭಿಸಬೇಕು ಎಂದವರು ಹೇಳಿದ್ದಾರೆ. ಐಎಂಎಫ್‌ನಿಂದ 6.5 ಶತಕೋಟಿ ಡಾಲರ್ ಸಾಲ ಪಡೆಯುವ ನಿಟ್ಟಿನಲ್ಲಿ ಮಾತುಕತೆ ಮುಂದುವರಿದಿದ್ದು ಶೀಘ್ರ ಒಪ್ಪಂದಕ್ಕೆ ಬರುವ ನಿರೀಕ್ಷೆಯಿದೆ ಎಂದು ಪಾಕ್ ಸರಕಾರ ಹೇಳಿದೆ.







