ಪತಿ, ಅತ್ತೆಯ ಹತ್ಯೆಗೈದು, ಮೃತದೇಹ ತುಂಡರಿಸಿ ಫ್ರಿಜ್‌ನಲ್ಲಿರಿಸಿದ ಮಹಿಳೆ !

ಗುವಾಹತಿ, ಫೆ. 20: ಮಹಿಳೆಯೋರ್ವಳು ತನ್ನ ಪತಿ ಹಾಗೂ ಅತ್ತೆಯನ್ನು ಹತ್ಯೆಗೈದು ಅವರ ಮೃತದೇಹವನ್ನು ತುಂಡರಿಸಿ ಪ್ರಿಜ್‌ನಲ್ಲಿ ಇರಿಸಿದ ಘಟನೆ ಗುವಾಹತಿಗೆ ಸಮೀಪದ ಅಸ್ಸಾಂನ ನೂನ್ಮತಿಯಲ್ಲಿ ನಡೆದಿದೆ.
ಶ್ರದ್ಧಾ ವಾಲ್ಕರ್ ಪ್ರಕರಣ ಹಾಗೂ ನಿಕ್ಕಿ ಯಾದವ್ ಪ್ರಕರಣ ಮನಸ್ಸಿನಿಂದ ಮರೆಯಾಗುವ ಮುನ್ನವೇ ಈ ಪ್ರಕರಣ ವರದಿಯಾಗಿದೆ. ಪತಿ ಹಾಗೂ ಅತ್ತೆಯನ್ನು ಹತ್ಯೆಗೈದ ಮಹಿಳೆಯನ್ನು ವಂದನಾ ಕಲಿಟಾ ಎಂದು ಗುರುತಿಸಲಾಗಿದೆ. ಈಕೆಗೆ ಅಕ್ರಮ ಸಂಬಂಧ ಇತ್ತು. ಈ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾಳೆ ಎಂದು ಆರೋಪಿಸಲಾಗಿದೆ.
ಪತಿ ಅಮರ್‌ಜ್ಯೋತಿ ದೇಯ್ ಹಾಗೂ ಅತ್ತೆ ಶಂಕರಿ ದೇಯ್ ಅವರನ್ನು ಹತ್ಯೆಗೈದ ಮೂರು ದಿನಗಳ ಬಳಿಕ ವಂದನಾ ಕಲೀಟಾ ಹಾಗೂ ಆಕೆಯ ಪ್ರಿಯಕರ ಮೃತದೇಹವನ್ನು ಕತ್ತರಿಸಿ, ಅದರ ಭಾಗಗಳನ್ನು ಗುವಾಹಟಿಯಿಂದ 150 ಕಿ.ಮೀ. ದೂರದಲ್ಲಿರುವ ಸಮೀಪದ ಮೇಘಾಲಯದ ಚಿರಾಪುಂಜಿಗೆ ಕೊಂಡೊಯ್ದಿದ್ದಾರೆ. ಅಲ್ಲಿ ಮೃತದೇಹದ ಭಾಗಗಳನ್ನು ಎಸೆದಿದ್ದಾರೆ. ಅದನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ವಂದನಾ ಕಲೀಟಾ ಹಾಗೂ ಆಕೆಯ ಪ್ರಿಯಕರ ಎಸೆದ ತಾಯಿ ಹಾಗೂ ಮಗನ ಮೃತದೇಹದ ಭಾಗವನ್ನು ತೋರಿಸಲು ಅಸ್ಸಾಂ ಪೊಲೀಸರ ತಂಡ ವಂದನಾ ಕಲೀಟಾಳನ್ನು ಮೇಘಾಲಯದ ಚೀರಾಪುಂಜಿಗೆ ಕರೆದೊಯ್ದಿತ್ತು’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘‘ವಂದನಾ ಕಲೀಟಾ ಹಾಗೂ ಆಕೆಯ ಪ್ರಿಯಕರ ಅವರಿಬ್ಬರನ್ನು ಹತ್ಯೆಗೈದ ಬಳಿಕ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾಳೆ. ಅನಂತರ ತುಂಡುಗಳನ್ನು ಫ್ರಿಜ್‌ನಲ್ಲಿ ಇರಿಸಿದ್ದಾಳೆ’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.







