ಸುಳ್ಳು ಮಾದಕ ದ್ರವ್ಯ ಪ್ರಕರಣದಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಸಂಜೀವ್ ಭಟ್ ಗೆ 10,000 ರೂ. ದಂಡ ಹೇರಿದ ಸುಪ್ರೀಂ

ಹೊಸದಿಲ್ಲಿ: ಗುಜರಾತ್ ಉಚ್ಚ ನ್ಯಾಯಾಲಯದ ಆದೇಶವೊಂದನ್ನು ಪ್ರಶ್ನಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಸಂಜೀವ ಭಟ್ ಅವರಿಗೆ ಸರ್ವೋಚ್ಚ ನ್ಯಾಯಾಲಯವು 10,000 ರೂ. ಗಳ ದಂಡವನ್ನು ವಿಧಿಸಿದೆ. ಭಟ್ ವಿರುದ್ಧದ 22 ವರ್ಷಗಳಷ್ಟು ಹಳೆಯ ಪ್ರಕರಣದಲ್ಲಿ ವಿಚಾರಣೆಯನ್ನು ಮಾ.31ರೊಳಗೆ ಪೂರ್ಣಗೊಳಿಸುವಂತೆ ಹೈಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿತ್ತು.
ಪ್ರಕರಣವು 1996ರಲ್ಲಿ ಭಟ್ ಗುಜರಾತಿನ ಬನಾಸಕಾಂತಾ ಜಿಲ್ಲೆಯ ಎಸ್ಪಿಯಾಗಿದ್ದಾಗ ರಾಜಸ್ಥಾನದ ವಕೀಲ ಸುಮೇರಸಿಂಗ್ ರಾಜಪುರೋಹಿತ ಬಂಧನಕ್ಕೆ ಸಂಬಂಧಿಸಿದೆ. ರಾಜಪುರೋಹಿತ ಬಳಿಯಿಂದ ತಾವು ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾಗಿ ಪೊಲೀಸರು ಹೇಳಿದ್ದರು.
ಆದರೆ, ಬನಾಸಕಾಂತಾ ಪೊಲೀಸರು ರಾಜಸ್ಥಾನದ ಪಾಲಿಯಲ್ಲಿನ ಆಸ್ತಿಯೊಂದರ ವರ್ಗಾವಣೆಗೆ ಒತ್ತಡ ಹೇರಲು ರಾಜಪುರೋಹಿತರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದರು ಎಂದು ರಾಜಸ್ಥಾನ ಪೊಲೀಸರು ನಂತರ ಹೇಳಿದ್ದರು. ಜೂನ್ 2018ರಲ್ಲಿ ಉಚ್ಚ ನ್ಯಾಯಾಲಯವು ತನಿಖೆಯನ್ನು ರಾಜ್ಯದ ಅಪರಾಧ ತನಿಖೆ ಇಲಾಖೆಗೆ ಹಸ್ತಾಂತರಿಸಿತ್ತು ಮತ್ತು ಅದೇ ವರ್ಷದ ಸೆಪ್ಟಂಬರ್ನಲ್ಲಿ ಭಟ್ ಅವರನ್ನು ಬಂಧಿಸಲಾಗಿತ್ತು.
ಪ್ರಕರಣದ ತ್ವರಿತ ಇತ್ಯರ್ಥಕ್ಕಾಗಿ ಭಟ್ ವಿಚಾರಣೆಗೆ ಸಹಕರಿಸಬೇಕು ಎಂದು ಸೋಮವಾರದ ವಿಚಾರಣೆ ಸಂದರ್ಭ ಒತ್ತಿ ಹೇಳಿದ ಸರ್ವೋಚ್ಚ ನ್ಯಾಯಾಲಯವು, ಕ್ರಿಮಿನಲ್ ಪ್ರಕರಣದಲ್ಲಿಯ ಕಕ್ಷಿಗಳು ವಿಚಾರಣೆಯು ತ್ವರಿತವಾಗಿ ಮುಗಿಯುವಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರಬೇಕು. ಅವಧಿ ವಿಸ್ತರಣೆಯು ವಿಚಾರಣಾ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ನಡುವಿನ ವಿಷಯವಾಗಿದೆ ಎಂದು ತಿಳಿಸಿತು.
ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ಪೂರ್ಣಗೊಳ್ಳಲು ಇನ್ನೂ ಆರು ತಿಂಗಳ ಸಮಯವನ್ನು ಅಂದಾಜಿಸಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ ಭಟ್ ಪರ ವಕೀಲ ದೇವದತ್ತ ಕಾಮತ ಅವರು, ಪ್ರಕರಣದಲ್ಲಿಯ 60 ಸಾಕ್ಷಿಗಳ ಪೈಕಿ ಈವರೆಗೆ ಕೇವಲ 16 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು.
ಉಚ್ಚ ನ್ಯಾಯಾಲಯವು ಗಡುವು ನಿಗದಿಗೊಳಿಸಿದ ಬಳಿಕ ಭಟ್ ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣಾ ನ್ಯಾಯಾಲಯವು ಪರಿಗಣಿಸುತ್ತಿಲ್ಲ ಮತ್ತು ಇದು ನ್ಯಾಯಯುತ ವಿಚಾರಣೆಯ ನಿರಾಕರಣೆಯಾಗಿದೆ ಎಂದೂ ಕಾಮತ್ ಪ್ರತಿಪಾದಿಸಿದರು.
ಭಟ್ 30 ವರ್ಷಗಳಷ್ಟು ಹಿಂದಿನ ಕಸ್ಟಡಿ ಸಾವಿನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನೂ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: ಎಲ್ಲ ಧರ್ಮಗಳಲ್ಲೂ ವಿಚ್ಛೇದನ ನಡೆಯುವಾಗ ತ್ರಿವಳಿ ತಲಾಖ್ ಅನ್ನು ಅಪರಾಧವನ್ನಾಗಿಸಿದ್ದೇಕೆ: ಪಿಣರಾಯಿ ವಿಜಯನ್ ಪ್ರಶ್ನೆ







