ಎಪ್ರಿಲ್-ಡಿಸೆಂಬರ್ ನಡುವೆ ವಿದೇಶ ಪ್ರಯಾಣಕ್ಕೆ 10 ಶತಕೋಟಿ ಡಾಲರ್ ವ್ಯಯಿಸಿದ ಭಾರತೀಯರು

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಭತ್ತು ತಿಂಗಳುಗಳಲ್ಲಿ ಭಾರತೀಯರು ವಿದೇಶ ಪ್ರವಾಸಗಳಿಗಾಗಿ ಸುಮಾರು 10 ಶತಕೋಟಿ ಡಾಲರ್ (82,793.5 ಕೋಟಿ ರೂ.) ಗಳನ್ನು ವ್ಯಯಿಸಿದ್ದು, ಇದು ಯಾವುದೇ ಪೂರ್ಣ ಹಣಕಾಸು ವರ್ಷಕ್ಕಿಂತ ಅಧಿಕವಾಗಿದೆ. ಕೋವಿಡ್ ಸಾಂಕ್ರಾಮಿಕಕ್ಕೆ ಮುನ್ನ 2020ನೇ ಹಣಕಾಸು ವರ್ಷದಲ್ಲಿ ಭಾರತೀಯರು ವಿದೇಶ ಪ್ರವಾಸಗಳಿಗಾಗಿ ಸುಮಾರು ಏಳು ಶತಕೋಟಿ ಡಾಲರ್ (57,976.8 ಕೋಟಿ ರೂ.) ವ್ಯಯಿಸಿದ್ದು ಯಾವುದೇ ಹಣಕಾಸು ವರ್ಷಕ್ಕೆ ಹಿಂದಿನ ದಾಖಲೆ ಮೊತ್ತವಾಗಿತ್ತು.
ಆರ್ಬಿಐ ಇತ್ತೀಚಿಗೆ ಬಿಡುಗಡೆಗೊಳಿಸಿರುವ ಅಂಕಿಅಂಶಗಳಂತೆ 2022ರ ಡಿಸೆಂಬರ್ ತಿಂಗಳೊಂದರಲ್ಲೇ ಭಾರತೀಯರು ವಿದೇಶ ಪ್ರವಾಸಗಳಿಗೆ 113.70 ಕೋಟಿ ಡಾಲರ್ ಗಳನ್ನು ವ್ಯಯಿಸಿದ್ದಾರೆ. ಒಟ್ಟಾರೆಯಾಗಿ ಎಪ್ರಿಲ್ ನಿಂದ ಡಿಸೆಂಬರ್ ವರೆಗೆ ಭಾರತೀಯರು ವಿದೇಶ ಪ್ರವಾಸಗಳಿಗೆ ಒಟ್ಟು 994.7 ಕೋಟಿ ರೂ. ಗಳನ್ನು ವ್ಯಯಿಸಿದ್ದಾರೆ.
ಶಿಕ್ಷಣ, ಸಂಬಂಧಿಗಳ ನಿರ್ವಹಣೆ, ಉಡುಗೊರೆಗಳು ಮತ್ತು ಹೂಡಿಕೆಗಳಿಗೆ ವೆಚ್ಚ ಮಾಡಲಾಗಿರುವ ವಿದೇಶಿ ವಿನಿಮಯವನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯರು 1935.4 ಕೋಟಿ ಡಾಲರ್ ಗಳನ್ನು ವಿದೇಶಗಳಿಗೆ ರವಾನಿಸಿದ್ದಾರೆ. ಹಿಂದಿನ ಪೂರ್ಣ ಹಣಕಾಸು ವರ್ಷದಲ್ಲಿ ಈ ಮೊತ್ತ 1961 ಕೋಟಿ ಡಾಲರ್ ಆಗಿದ್ದು, ಅದು ವಿದೇಶಗಳಿಗೆ ಹಣ ರವಾನೆಗೆ ಸಂಬಂಧಿಸಿದಂತೆ ದಾಖಲೆಯ ವರ್ಷವಾಗಿತ್ತು.
ಹಣಕಾಸು ವರ್ಷ 2018ರವರೆಗೆ ವಿದೇಶಗಳಿಗೆ ಒಟ್ಟು ಮಾಸಿಕ ರವಾನೆ ಒಂದು ಶತಕೋಟಿ ಡಾಲರ್ ಗೂ ಕಡಿಮೆಯಿತ್ತು, ಭಾರತೀಯರು ಈಗ ಮಾಸಿಕ ಸುಮಾರು ಎರಡು ಶತಕೋಟಿ ಡಾ.ಗಳನ್ನು ವೆಚ್ಚ ಮಾಡುತ್ತಿದ್ದಾರೆ.
ಇದನ್ನು ಓದಿ: ಎಲ್ಲ ಧರ್ಮಗಳಲ್ಲೂ ವಿಚ್ಛೇದನ ನಡೆಯುವಾಗ ತ್ರಿವಳಿ ತಲಾಖ್ ಅನ್ನು ಅಪರಾಧವನ್ನಾಗಿಸಿದ್ದೇಕೆ: ಪಿಣರಾಯಿ ವಿಜಯನ್ ಪ್ರಶ್ನೆ







