ಕೊಲೆ ಮಾಡ್ತೀನಿ ಅಂದ್ರೆ ಹೆದರೋದಿಲ್ಲ, ಧಮ್ಮಿದ್ರೆ, ತಾಕತ್ತಿದ್ದರೆ ಹೊಡೆದಾಕ್ಲಿ ನೋಡೋಣ: ಸದನದಲ್ಲಿ ಸಿದ್ದರಾಮಯ್ಯ

ಬೆಂಗಳೂರು: ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಅವರು ವಿಧಾನ ಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿಧಾನ ಸಭೆಯಲ್ಲಿ ಪ್ರತಿಧ್ವನಿಸಿತು.
ಮಂಗಳವಾರ ಜಂಟಿ ಅಧಿವೇಶನದಲ್ಲಿ ಬಜೆಟ್ ಕುರಿತ ಚರ್ಚೆ ಸಂದರ್ಭದಲ್ಲಿ ಸಚಿವ ಅಶ್ವತ್ಥನಾರಾಯಣ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯ, ''ಹೊಡಿ, ಬಡಿ ಅಂತಾ ಯಾವ ಧರ್ಮವೂ ಹೇಳಿಕೊಡಲ್ಲ. ಇಂತಹ ಹೇಳಿಕೆಗಳಿಗೆಲ್ಲ ನಾನು ಬಗ್ಗುವವನಲ್ಲ, ಹತಾಶನಾಗಲ್ಲ. ಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ, ಹೊಡೆದು ಹಾಕಲಿ ನೋಡೋಣ' ಎಂದು ಸದನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಸವಾಲೆಸೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, 'ಸಚಿವರು (ಅಶ್ವತ್ಥನಾರಾಯಣ) ಆಡು ಭಾಷೆಯಲ್ಲಿ ಹೇಳಿದ್ದಾರೆ. ಅ್ಲಲದೇ, ನಿಮ್ಮ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿಯೂ ಹೇಳಿದ್ದಾರೆ' ಎಂದರು.
''ಬಿಜೆಪಿ ನಾಯಕರು ಸೋಲಿನ ಭೀತಿಯಿಂದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಸಿದ್ಧವಾಗಿಲ್ಲ. ಆರಗ ಜ್ಞಾನೇಂದ್ರ ಅವರೇ ನಿಮ್ಮ ಇಲಾಖೆ ಸತ್ತು ಹೋಗಿದೆ. ನೀವು ಇಲಾಖೆ ಮುನ್ನಡೆಸಲು ಅಸಮರ್ಥರು'' ಎಂದು ಸಿದ್ದರಾಮಯ್ಯ ಕಿಡಿಕಾರಿದರು.