ದುಲ್ಕರ್, ಆಲಿಯಾ, ರಣಬೀರ್‌ಗೆ ಪ್ರಶಸ್ತಿ: 'ನೆಪೋ ಗ್ಯಾಂಗ್' ಪ್ರತಿಭಾನ್ವಿತರ ಪ್ರಶಸ್ತಿ ಬಾಚುತ್ತಿದೆ ಎಂದ ಕಂಗನಾ

ಮುಂಬೈ: ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್ ಮತ್ತೆ ಬಾಲಿವುಡ್ ಮಂದಿಯ ಮೇಲೆ ಹರಿಹಾಯ್ದಿದ್ದು, ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಈ ಬಾರಿಯೂ 'ಬಾಲಿವುಡ್ ನೆಪೋ' ಗ್ಯಾಂಗ್ ಗೆ ಸಿಕ್ಕಿದೆ ಎಂದು ಆರೋಪಿಸಿದ್ದಾರೆ.
ಸಿನೆಮಾ ಹಿನ್ನೆಲೆಯ ಕುಟುಂಬಗಳಿಂದ ಬಂದ ತಾರೆಯರನ್ನು ಸಾಮಾನ್ಯವಾಗಿ ನೆಪೋ ಕಿಡ್ಸ್ ಅಥವಾ ನೆಪೋ ಗ್ಯಾಂಗ್ ಎಂದು ಕರೆಯಲಾಗುತ್ತಿದ್ದು, ನಟ ಸುಶಾಂತ್ ಆತ್ಮಹತ್ಯೆಯ ಬಳಿಕ ನೆಪೋಟಿಸಂ ವಿರುದ್ಧ ಕೆಲವರು ಅಭಿಯಾನ ಆರಂಭಿಸಿದ್ದಾರೆ. ಕಂಗನಾ ಕೂಡಾ ನೆಪೋಟಿಸಂ ವಿರುದ್ಧ ಹಲವು ಬಾರಿ ಮಾತನಾಡಿದ್ದಾರೆ.
ಮಮ್ಮುಟ್ಟಿ ಪುತ್ರ ದುಲ್ಕರ್ ಸಲ್ಮಾನ್, ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮೊದಲಾದವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿರುವ ಹಿನ್ನೆಲೆಯಲ್ಲಿ ಕಂಗಣಾ ರಾಣಾವತ್ ನಿರ್ದಿಷ್ಟವಾಗಿ ಯಾರನ್ನು ಉದ್ದೇಶಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.
ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ, ‘ಪ್ರಶಸ್ತಿಗಳ ಸೀಸನ್ ಪ್ರಾರಂಭವಾಗಿದೆ. ನೆಪೋ ಮಾಫಿಯಾ ಮತ್ತೆ ಅದರ ಮೇಲೆ ನಿಂತಿದೆ, ಅರ್ಹ ಪ್ರತಿಭೆಗಳಿಂದ ಎಲ್ಲಾ ಪ್ರಶಸ್ತಿಗಳನ್ನು ಕಸಿದುಕೊಳ್ಳುತ್ತಿದೆ. 2022ರಲ್ಲಿ ಕಲಾತ್ಮಕ ತೇಜಸ್ಸನ್ನು ಪ್ರದರ್ಶಿಸಿದ ಪ್ರಶಸ್ತಿ ಪಡೆಯಬೇಕಾದವರ ಪಟ್ಟಿ ಇಲ್ಲಿದೆ’ ಎಂದಿದ್ದಾರೆ.
ಅತ್ಯುತ್ತಮ ನಟ - ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಟಿ-ಮೃಣಾಲ್ ಠಾಕೂರ್ (ಸೀತಾ ರಾಮಂ)
ಅತ್ಯುತ್ತಮ ನಿರ್ದೇಶಕ - ಎಸ್ಎಸ್ ರಾಜಮೌಳಿ (ಆರ್‌ಆರ್‌ಆರ್)
ಅತ್ಯುತ್ತಮ ಪೋಷಕ ನಟ- ಅನುಪಮ್ ಖೇರ್ (ಕಾಶ್ಮೀರ ಫೈಲ್ಸ್)
ಅತ್ಯುತ್ತಮ ಪೋಷಕ ನಟಿ- ಟಬು (ದೃಶ್ಯಮನ್/ಭೂಲ್ ಭುಲೈಯಾ)
ʼಬಾಲಿ(ವುಡ್) ಪ್ರಶಸ್ತಿಗಳು ಒಂದು ದೊಡ್ಡ ಸೋಗು ... ನನ್ನ ವೇಳಾಪಟ್ಟಿಯಿಂದ ಸ್ವಲ್ಪ ಬಿಡುವು ಸಿಕ್ಕಾಗ ಅರ್ಹರು ಎಂದು ನಾನು ಭಾವಿಸುವ ಎಲ್ಲರ ಪಟ್ಟಿಯನ್ನು ಮಾಡುತ್ತೇನೆ ... ಧನ್ಯವಾದಗಳುʼ ಎಂದು ಕಂಗಣಾ ಟ್ವೀಟ್ ಮಾಡಿದ್ದಾರೆ.
ದುಲ್ಕರ್ ಸಲ್ಮಾನ್ ಛುಪ್ ಚಿತ್ರದ ಅಭಿನಯಕ್ಕೆ ಪ್ರಶಸ್ತಿ ಪಡೆದರೆ, ಗಂಗೂಭಾಯಿ ಕಥಿಯಾವಾಡಿ ಚಿತ್ರದ ಅಭಿನಯಕ್ಕೆ ಆಲಿಯಾ ಭಟ್ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
ಇದನ್ನೂ ಓದಿ: ಡ್ರಗ್ ಮಾಫಿಯಾ ಕುರಿತು ಬಹಿರಂಗಪಡಿಸಿದ ಕೇರಳದ 9ನೇ ತರಗತಿ ವಿದ್ಯಾರ್ಥಿನಿ