ಉಳ್ಳಾಲ ನಗರಸಭೆ: ಕಿವಿಗೆ ಹೂವಿಟ್ಟು ಕಾಂಗ್ರೆಸನ್ನು ಅಣಕಿಸಿದ ಜೆಡಿಎಸ್

ಉಳ್ಳಾಲ: ನಗರಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡನೆ ಸಂದರ್ಭ ಬಜೆಟ್ ಅನ್ನು ವಿರೋಧಿಸಿ ಜೆಡಿಎಸ್ ಸದಸ್ಯರು ಕಿವಿಗೆ ಹೂವಿಟ್ಟು ಆಡಳಿತರೂಢ ಕಾಂಗ್ರೆಸ್ ನ್ನು ಅಣಕಿಸಿದರು.
ಸಿಎಂ ಬೊಮ್ಮಾಯಿ ಅವರು ರಾಜ್ಯ ಬಜೆಟ್ ಮಂಡನೆ ಮಾಡುವಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಶಾಸಕರು ಸದನದಲ್ಲಿ ಕಿವಿಗೆ ಹೂ ಇಟ್ಟು ಸರ್ಕಾರವನ್ನ ಅಣಕಿಸಿ ಗಮನ ಸೆಳೆದಿದ್ದರು. ಕಾಂಗ್ರೆಸ್ ಬಳಸಿದ ಇದೇ ಅಸ್ತ್ರವನ್ನೇ ಉಳ್ಳಾಲ ನಗರ ಸಭೆಯ ಜೆಡಿಎಸ್ ಸದಸ್ಯರು ಬಳಸಿದರು. ಆರಂಭದಲ್ಲಿ ಚೆನ್ನಾಗಿಯೇ ನಡೆದ ಸಭೆ ಕೊನೆಗೆ ಗದ್ದಲದಲ್ಲಿ ಅಂತ್ಯವಾಯಿತು.
ಬಜೆಟ್ ಮಂಡನೆ ವೇಳೆ ಜೆಡಿಎಸ್ ಸದಸ್ಯರಾದ ದಿನಕರ ಉಳ್ಳಾಲ್, ಅಬ್ದುಲ್ ಬಶೀರ್, ಖಲೀಲ್, ಜಬ್ಬಾರ್, ಮುಷ್ತಾಕ್ ಪಟ್ಲ ಅವರು ಕಿವಿಗೆ ಹೂವಿಟ್ಟು ಬಜೆಟ್ ಗೆ ವಿರೋಧ ವ್ಯಕ್ತ ಪಡಿಸಿದರು.
ಈ ವೇಳೆ ಬಿಜೆಪಿ ನಾಮ ನಿರ್ದೇಶಿತ ಸದಸ್ಯ ಬಾಬು ಬಂಗೇರ ಮಾತನಾಡಿ, ‘ಕಾಂಗ್ರೆಸ್ ಬಜೆಟ್‌ಗೆ ಬೆಂಬಲ ಸೂಚಿಸಿದರೆ, ಜೆಡಿಎಸ್‌ನವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ನಾವು ಬಜೆಟ್ ವಿಚಾರದಲ್ಲಿ ತಟಸ್ಥ’ ಎಂದಾಕ್ಷಣ ಸಭೆಯ ವೇದಿಕೆಯಲ್ಲಿದ್ದ ನಗರಸಭೆ ಉಪಾಧ್ಯಕ್ಷ ಆಯುಬ್ ಮಂಚಿಲ ಟೇಬಲನ್ನ ಬಡಿದು ಬೆಂಬಲ ಸೂಚಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ನ ದಿನಕರ್ ಉಳ್ಳಾಲ್, ‘ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷ ಕಾಂಗ್ರೆಸ್ ಹೊಂದಾಣಿಕೆಯ ರಾಜಕೀಯ ನಡೆಸುತ್ತಿವೆ. ನೀವಿಬ್ಬರು ಒಂದೇ ನಾಣ್ಯದ ಎರಡು ಮುಖಗಳು’ ಎಂದು ಆಕ್ಷೇಪಿಸಿದರು.
ಆಡಳಿತ- ವಿರೋಧ ಪಕ್ಷಗಳ ನಡುವೆ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಅಧ್ಯಕ್ಷತೆ ವಹಿಸಿದ್ದ ನಗರ ಸಭೆ ಅಧ್ಯಕ್ಷೆ ಚಿತ್ರಕಲಾ ಅವರು ಗದ್ದಲ, ಗಲಾಟೆಯ ಮಧ್ಯೆಯೇ ರಾಷ್ಟ್ರಗೀತೆ ಹಾಡುವುದಕ್ಕೆ ಸೂಚಿಸಿದರು.
ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಕ್ಕೆ ಆಕ್ಷೇಪಿಸಿದ ಎಸ್‌ಡಿಪಿಐ ಸದಸ್ಯ ಅಸ್ಗರ್ ಆಲಿ, ‘ಸಭೆ ಸಂಪೂರ್ಣಗೊಂಡಿಲ್ಲ’ ಎಂಬುದಾಗಿ ದಾಖಲಿಸಬೇಕು’ ಎಂದು ಸೂಚಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್ ನ ಭಾರತಿ ಮತ್ತು ವೀಣಾ ಶಾಂತಿ ಡಿಸೋಜ ಅಸ್ಗರ್ ವಿರುದ್ಧ ಪೊಲೀಸ್ ದೂರು ನೀಡುವಂತೆ ಹೇಳಿದ್ದು ಎಸ್ಡಿಪಿಐ ಸದಸ್ಯರನ್ನು ಕೆರಳಿಸಿತು. ಈ ವೇಳೆ ಮಾತಿನ ಚಕಮಕಿ ಹಾಗೂ ತಳ್ಳಾಟ ನಡೆಯಿತು.