ಗೇರು ಕೃಷಿಭೂಮಿ ಶ್ರೀಮಂತರಿಗೆ ವರ್ಗಾಯಿಸುವ ಹುನ್ನಾರ: ಸಿಪಿಐಎಂ

ಉಡುಪಿ: ಮುಖ್ಯಮಂತ್ರಿ ಬೊಮ್ಮಾಯಿ ಹಣಕಾಸು ಸಚಿವರಾಗಿ ಮಂಡಿಸಿದ ಬಜೆಟ್ ನಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ 4292 ಎಕರೆ ಸರಕಾರಿ ಒಡೆತನದ ಗೇರು ಲೀಸ್ ಭೂಮಿಯನ್ನು ನಿಗದಿತ ಮೌಲ್ಯ ನೀಡಿದಲ್ಲಿ ಗುತ್ತಿಗೆದಾರರಿಗೆ ಹಸ್ತಾಂತರಿಸುವ ಕುರಿತ ಪ್ರಸ್ತಾಪವನ್ನು ಸಿಪಿಐಎಂ ತೀವ್ರವಾಗಿ ವಿರೋಧಿಸಿದೆ.
ಎರಡು ಜಿಲ್ಲೆಗಳಲ್ಲಿ ಸಾವಿರಾರು ನಿವೇಶನ ರಹಿತರು, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಅವುಗಳ ವಿಲೆವಾರಿ ಆಗಿಲ್ಲ. ನಿವೇಶನ ರಹಿತರ ಹೋರಾಟದ ನಂತರ ಪಂಚಾಯತ್, ಪುರಸಭೆ, ನಗರಸಭೆ ಮಟ್ಟದಲ್ಲಿ ಪಟ್ಟಿಯನ್ನು ತಯಾರಿಸಲಾಗಿದೆ. ನಿವೇಶನ ನೀಡಲು ಸರಕಾರಿ ಭೂಮಿಯೇ ಇಲ್ಲ ಎಂಬ ವಾದ ಮಂಡಿಸಲಾಗುತ್ತಿದೆ. ೯೪ಸಿ ಮತ್ತು ೯೪ಸಿಸಿ ಅಡಿಯಲ್ಲಿ ಈಗಾಗಲೆ ವಾಸವಾಗಿರುವ ಗ್ರಾಮೀಣ ಮತ್ತು ನಗರ ಪ್ರದೇಶದ ಬಡವರಿಗೆ ಕಾನೂನು ತೊಡಕಿನ ನೆಪ ಹೇಳಿ ಹಕ್ಕು ಪತ್ರ ನೀಡಲಾಗಿಲ್ಲ ಎಂದು ಸಿಪಿಐಎಂ ದೂರಿದೆ.
ಕೃಷಿ ಕಾಯಿದೆಗೆ ತಿದ್ದುಪಡಿ ತಂದು, ಗರಿಷ್ಠ ಭೂ ಮಿತಿಯನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ ಕೃಷಿಕರಲ್ಲದವರಿಗೂ ಕೃಷಿ ಭೂಮಿಯನ್ನು ಮಾರಾಟ ಮಾಡಬಹು ದೆಂಬ ತಿದ್ದುಪಡಿ ತಂದಿರುವುದರಿಂದ ಗೇರು ಕೃಷಿ ಭೂಮಿ ಕಾರ್ಪೊರೇಟ್ ಕಂಪೆನಿಗಳ ಪಾಲಾಗಲಿದೆ ಎಂದು ಸಿಪಿಐಎಂ ಎಚ್ಚರಿಸಿದೆ. ಬಿಜೆಪಿ ಸರಕಾರದ ಶ್ರೀಮಂತರ ಪರ ಮತ್ತು ಬಡ, ಮಧ್ಯಮ ವರ್ಗದ ಜನರ ವಿರೋಧಿ ನಿಲುವನ್ನು ಸಿಪಿಐಎಂ ಉಗ್ರವಾಗಿ ಖಂಡಿಸುತ್ತದೆ. ಅಲ್ಲದೆ ಜನತೆ ಇದರ ವಿರುದ್ಧ ಪ್ರತಿ ಭಟನೆಗೆ ಮುಂದಾಗಬೇಕೆಂದು ಸಿಪಿಎಂ ಬಾಲಕೃಷ್ಣ ಶೆಟ್ಟಿ, ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







