ಕಡಬ ಕಾಡಾನೆ ದಾಳಿ | ಯುವತಿಯ ರಕ್ಷಣೆಗೆ ತೆರಳಿದ್ದ ರಮೇಶ್ ರೈಗೆ ‘ಶೌರ್ಯ ಪ್ರಶಸ್ತಿ’ ನೀಡಲು ಯು.ಟಿ.ಖಾದರ್ ಆಗ್ರಹ

ಬೆಂಗಳೂರು, ಫೆ. 21: ‘ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ಬಳಿಯ ಮೀನಾಡಿ ಸಮೀಪದ ನೈಲ ಎಂಬಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟವರಿಗೆ ಹೆಚ್ಚಿನ ಮೊತ್ತದ ಪರಿಹಾರ ನೀಡುವುದರ ಜೊತೆಗೆ ರಕ್ಷಣೆಗೆ ತೆರಳಿ ಸಾವನ್ನಪ್ಪಿದ ರಮೇಶ್ ರೈ ಅವರಿಗೆ ಮರಣೋತ್ತರ ‘ಶೌರ್ಯ ಪ್ರಶಸ್ತಿ’ ನೀಡಬೇಕು’ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕಾಡಾನೆ ದಾಳಿಯಿಂದ ಯುವತಿ ರಂಜಿತಾ(24) ಹಾಗೂ ಆಕೆ ರಕ್ಷಿಸಲು ತೆರಳಿದ ರಮೇಶ್ ರೈ ಎಂಬವರು ಅಸುನೀಗಿದ್ದಾರೆ. ವನ್ಯಜೀವಿ ದಾಳಿ ಸಂದರ್ಭದಲ್ಲಿ ಕೂಡಲೇ ಅವರುಗಳನ್ನು ಹಿಡಿಯಲು ಸರಕಾರ ಕ್ರಮ ವಹಿಸಬೇಕು. ಜೊತೆಗೆ ಈಗಾಗಲೇ 15 ಲಕ್ಷ ರೂ.ಪರಿಹಾರ ಪ್ರಕಟಿಸಿದ್ದು, ಅದನ್ನು 25ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಆನೆ ದಾಳಿ ಸಂದರ್ಭದಲ್ಲಿ ಜೀವದ ಹಂಗನ್ನು ತೊರೆದು ಯುವತಿಯ ರಕ್ಷಣೆಗೆ ರಮೇಶ್ ರೈ (58) ಎಂಬವರು ಮುಂದಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಅವರಿಗೆ ಶೌರ್ಯ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಇದರಿಂದ ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಧಾವಿಸಬೇಂಬ ಸಂದೇಶ ನೀಡುವ ಮೂಲಕ ಬೇರೆಯವರಿಗೂ ಸ್ಫೂರ್ತಿ ಆಗುವಂತೆ ಕ್ರಮ ವಹಿಸಬೇಕೆಂದು ಖಾದರ್ ಸಲಹೆ ನೀಡಿದರು.
ಬಳಿಕ ಸರಕಾರದ ಪರವಾಗಿ ಉತ್ತರ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ‘ಇಂತಹ ಘಟನೆಗಳು ಮರುಕಳಿಸಬಾರದು. ವಿಪಕ್ಷ ಉಪನಾಯಕರು ಪ್ರಸ್ತಾಪಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಚಿವರಿಂದ ನಾಳೆ(ಫೆ.22) ಉತ್ತರ ಕೊಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.







