ಬೆಂಗಳೂರು | ದ್ವೇಷ ಭಾಷಣಗಳ ವಿರುದ್ಧ ಎಫ್‍ಐಆರ್ ಗಳಿಲ್ಲ ಏಕೆ?: ಡಿಜಿಪಿಗೆ ಪ್ರಶ್ನೆಗಳ ಸುರಿಮಳೆಗೈದ ಪ್ರತಿಭಟನಾಕಾರರು

ಬೆಂಗಳೂರು, ಫೆ.21: ರಾಜ್ಯದಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣಗಳ ವಿರುದ್ಧ ಪೊಲೀಸ್ ಇಲಾಖೆ ಏಕೆ ಕ್ರಮ ಜರುಗಿಸುತ್ತಿಲ್ಲ ಎಂದು ಬಹುತ್ವ ಸಂಘಟನೆ ಸದಸ್ಯ ಹಾಗೂ ವಕೀಲ ವಿನಯ್ ಶ್ರೀನಿವಾಸ್ ಡಿಜಿಪಿಯವರನ್ನು ಪ್ರಶ್ನಿಸಿದ್ದಾರೆ.
ಮಂಗಳವಾರ ಕೆಲವು ಸಂಘಟನೆಗಳು, ವಕೀಲರು ಮತ್ತು ವಿದ್ಯಾರ್ಥಿಗಳು ಡಿಜಿಪಿ ಕಚೇರಿ ಬಳಿ ಜಮಾಯಿಸಿ ಡಿಜಿಪಿಯವರಿಗೆ ಪ್ರಶ್ನಾವಳಿಯ ಮನವಿ ಪತ್ರವನ್ನು ಸಲ್ಲಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದ ನಾಗರಿಕರನ್ನು ರಕ್ಷಿಸುವುದು ಪೊಲೀಸರ ಕರ್ತವ್ಯವಾಗಿದ್ದು, ದ್ವೇಷದ ಭಾಷಣಕಾರರ ವಿರುದ್ಧ ಇಲಾಖೆ ಏಕೆ ಇದುವರೆಗೂ ಯಾವುದೇ ಸುಮೋಟೋ ಎಫ್‍ಐಆರ್‍ಗಳನ್ನು ದಾಖಲಿಸಿಲ್ಲ. ಜನರಲ್ಲಿ ಭದ್ರತೆಯ ಭಾವನೆಯನ್ನು ಸೃಷ್ಟಿಸುವ ಮತ್ತು ನಿರ್ವಹಿಸುವುದು ಪೊಲೀಸರ ಕೆಲಸವಾಗಬೇಕು ಎಂದರು.
ಮಹಿಳೆಯರು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಭದ್ರತೆಯ ಭಾವನೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಂಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸಂವಿಧಾನದ ಬಗ್ಗೆ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದಲು ತಮ್ಮ ಪ್ರತಿಜ್ಞೆಯನ್ನು ಮರೆತಿರುವಂತೆ ತೋರುತ್ತಿರುವಾಗ ಜನಸಾಮಾನ್ಯರು ಏನು ಮಾಡಬೇಕು. ಲವ್ ಜಿಹಾದ್ ಅಸ್ತಿತ್ವದಲ್ಲಿಲ್ಲ ಎಂದು ಸಂಸತ್ತು ಪದೇ ಪದೇ ಹೇಳುತ್ತಿದೆ. ಹೀಗಿದ್ದರೂ ಈ ಲವ್ ಜಿಹಾದ್ ಪುರಾಣ ಹರಡುವವರ ವಿರುದ್ಧ ಪೊಲೀಸರು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಡಿಜಿಪಿಯವರನ್ನು ಪ್ರಶ್ನಿಸಿದರು.
ಈ ವೇಳೆ ಪಿಯುಸಿಎಲ್‍ನ ಕರ್ನಾಟಕ ಅಧ್ಯಕ್ಷ ಅರವಿಂದ್ ನಾರಾಯಣ, ಮಹಿಳಾ ಹೋರಾಟಗಾರ್ತಿ ಮಧುಭೂಷಣ್ ಸೇರಿದಂತೆ ಹಲವರು ಇದ್ದರು.











.jpeg)


