‘ಭದ್ರಾ ಮೇಲ್ದಂಡೆ’ ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಘೋಷಿಸಿಲ್ಲ: ಸಿದ್ದರಾಮಯ್ಯ

ಬೆಂಗಳೂರು, ಫೆ.21: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರ ತನ್ನ ಬಜೆಟ್‍ನಲ್ಲಿ 5300 ಕೋಟಿ ರೂ.ಗಳನ್ನು ಒದಗಿಸುವುದಾಗಿ ತಿಳಿಸಿದೆ. ಆದರೆ, ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಎಲ್ಲೂ ಘೋಷಿಸಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ 2023-24ನೆ ಸಾಲಿನ ರಾಜ್ಯ ಬಜೆಟ್ ಮೇಲಿನ ಚರ್ಚೆಯಲ್ಲಿ ಅವರು ಮಾತನಾಡಿದರು. ಈ ವೇಳೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಸಿದ್ದರಾಮಯ್ಯ ನಡುವೆ ಜಟಾಪಟಿ ನಡೆಯಿತು.
ಕೇಂದ್ರ ಸರಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿಯೆ ನಮಗೆ 5300 ಕೋಟಿ ರೂ.ಅನುದಾನ ಘೋಷಿಸಿದೆ. ಈ ವಿಷಯ ಕೇಂದ್ರ ಸಚಿವ ಸಂಪುಟಕ್ಕೆ ಹೋಗಬೇಕಿತ್ತು. ಆದರೆ, ಬಜೆಟ್ ನಲ್ಲಿಯೆ ಯೋಜನೆ ಘೋಷಿಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಕೇಂದ್ರ ಸರಕಾರ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿರುವ ಬಗ್ಗೆ ದಾಖಲೆ ಕೊಡಿ ಎಂದು ಆಗ್ರಹಿಸಿದರು. ಬಜೆಟ್ ಮೇಲಿನ ಉತ್ತರ ನೀಡುವ ವೇಳೆ ಸದನದ ಮುಂದಿಡುತ್ತೇವೆ ಎಂದು ಕಾರಜೋಳ ತಿಳಿಸಿದರು.
ನಂತರ ಮಾತು ಮುಂದುವರೆಸಿದ ಸಿದ್ದರಾಮಯ್ಯ, ಈ ಬಾರಿಯ ಬಜೆಟ್‍ನಲ್ಲಿ ನೀರಾವರಿ ಇಲಾಖೆಗೆ 25 ಸಾವಿರ ಕೋಟಿ ರೂ.ಗಳನ್ನು ಮೀಸಲಿಡುವುದಾಗಿ ತಿಳಿಸಿದ್ದಾರೆ. ಆದರೆ, ಯಾವ ಯಾವ ಯೋಜನೆಗಳಿಗೆ ಎಷ್ಟೊಂದು ಹಣ ಇಟ್ಟಿದ್ದಾರೆ ಎಂಬ ಮಾಹಿತಿ ಇಲ್ಲ. ಈ ಗೌಪ್ಯತೆ ಯಾಕೆ? ಮೇಕೆದಾಟು ಯೋಜನೆಗೆ ಒಂದು ಸಾವಿರ ಕೋಟಿ ರೂ.ಗಳನ್ನು ಇಟ್ಟಿರುವುದಾಗಿ ಕಳೆದ ಬಾರಿ ಹೇಳಿದ್ದೀರಾ. ಕಾವೇರಿ ನೀರಾವರಿ ಪ್ರಾಧಿಕಾರದವರು ಮೇಕೆದಾಟು ಯೋಜನೆ ಬಗ್ಗೆ ಈವರೆಗೆ ಚರ್ಚೆ ಮಾಡಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, ಮೇಕೆದಾಟು ಯೋಜನೆಗೆ ನಾವು ಎಲ್ಲ ಆಯಾಮಗಳಿಂದಲೂ ಪ್ರಯತ್ನ ಮಾಡುತ್ತಿದ್ದೇವೆ. ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣ ಇದೆ ಎಂದರು. ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣ ಇರುವಾಗ ಬಜೆಟ್‍ನಲ್ಲಿ ಯಾಕೆ ಹಣ ಇಟ್ಟೀದ್ದೀರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸಾಲದ ಅಂಕಿ ಅಂಶಗಳಲ್ಲಿ ವ್ಯತ್ಯಾಸ: ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದ ಸಾಲ 6.18 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ. ರಾಜ್ಯ ಸರಕಾರ 5.64 ಲಕ್ಷ ಕೋಟಿ ರೂ.ಆಗುತ್ತದೆ ಎಂದಿದೆ. ಇವೆರೆಡರ ನಡುವಿನ ವ್ಯತ್ಯಾಸ 53,472 ಕೋಟಿ ರೂ. ಇಬ್ಬರಲ್ಲಿ ಯಾರು ಸುಳ್ಳು ಮಾಹಿತಿ ನೀಡಿದ್ದಾರೆ ಗೊತ್ತಿಲ್ಲ ಎಂದು ಅವರು ಹೇಳಿದರು.
ಸಾಲ ಹೆಚ್ಚಾಗುತ್ತಿರುವುದು 40 ಪರ್ಸೆಂಟ್ ಕಮಿಷನ್ ನಿಂದ. 100 ರೂಪಾಯಿಯ ಒಂದು ಯೋಜನೆಯಲ್ಲಿ 40 ರೂ.ಕಮಿಷನ್‍ಗೆ ಹೋದರೆ, ಶೇ.18ರಷ್ಟು ಜಿಎಸ್‍ಟಿ, ಗುತ್ತಿಗೆದಾರರ ಲಾಭ ಶೇ.20ರಷ್ಟು ಆದರೆ ಉಳಿಯುವುದು 22 ರೂಪಾಯಿ. ಹೀಗಾದರೆ ದುಡ್ಡು ಖಾಲಿಯಾಗುತ್ತದೆ, ಗುಣಮಟ್ಟದ ಕೆಲಸ ಆಗಲ್ಲ ಎಂದು ಅವರು ಹೇಳಿದರು.
ಪಸ್ತುತ ಬಜೆಟ್ ಸಾಲದ ಸುಳಿಯಲ್ಲಿ ರಾಜ್ಯವನ್ನು ಸಿಕ್ಕಿಸಿದೆ. 4 ವರ್ಷದಲ್ಲಿ 3.22 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಬಜೆಟ್‍ನಲ್ಲಿ ಎಲ್ಲಿಯೂ ಬದ್ಧ ಖರ್ಚು ಎಷ್ಟಾಗಿದೆ ಎಂದು ಹೇಳಿಲ್ಲ. ಈ ಬಜೆಟ್ ರೈತರು, ಬಡವರು, ಮಕ್ಕಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ವರ್ಗಗಳ ಜನರ ವಿರೋಧಿಯಾಗಿದೆ. ಹಾಗಾಗಿ ಈ ಬಜೆಟ್ ಅನ್ನು ತೀವ್ರವಾಗಿ ವಿರೋಧ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.







