ತಮಿಳುನಾಡಿನಲ್ಲಿ ವಿಶ್ವದ ಅತಿ ದೊಡ್ಡ ಇಲೆಕ್ಟ್ರಿಕ್ ವಾಹನ ತಯಾರಿಕಾ ಕೇಂದ್ರ ಸ್ಥಾಪನೆಗೆ ಓಲಾ ಒಪ್ಪಂದ
ಕರ್ನಾಟಕಕ್ಕೆ ತಪ್ಪಿದ ಅವಕಾಶ

ಚೆನ್ನೈ, ಫೆ. 21: ತಮಿಳುನಾಡಿನಲ್ಲಿ ಜಗತ್ತಿನ ಅತಿ ದೊಡ್ಡ ಇಲೆಕ್ಟ್ರಿಕ್ ವಾಹನ(Electric vehicle)ಗಳ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಇ.ವಿ. ತಯಾರಕ ಓಲಾ ಇಲೆಕ್ಟ್ರಿಕಲ್(Ola Electrical) ಸೋಮವಾರ ತಿಳಿಸಿದೆ. ಇಷ್ಟು ದೊಡ್ಡ ಹೂಡಿಕೆಯ ಅವಕಾಶ ಕಳೆದು ಕೊಂಡ ಕರ್ನಾಟಕದ ಬಿಜೆಪಿ ನೇತೃತ್ವದ ಸರಕಾರವನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ.
ಇಲೆಕ್ಟ್ರಿಕ್ ಕಾರುಗಳು ಹಾಗೂ ಲಿಥಿಯಂ-ಐಯಾನ್ ಸೆಲ್ಗಳನ್ನು ಉತ್ಪಾದಿಸಲು ಓಲಾ ತಮಿಳುನಾಡಿನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್(M.K. Stalin) ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಓಲಾ, ತಮಿಳುನಾಡಿನಲ್ಲಿ ಆರಂಭವಾಗುವ ಇಲೆಕ್ಟ್ರಿಕ್ ವಾಹನಗಳ ಕೇಂದ್ರ ಇಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಾಗಿರುವ ಎಲ್ಲವನ್ನು ಪೂರೈಸುವ ವ್ಯವಸ್ಥೆಯಾಗಿರಲಿದೆ ಎಂದಿದೆ. ಇಲೆಕ್ಟ್ರಿಕ್ ವಾಹನ ಹಾಗೂ ಬ್ಯಾಟರಿ ಉತ್ಪಾದನಾ ನೀತಿಯನ್ನು ಮೊಟ್ಟಮೊದಲಿಗೆ ಜಾರಿಗೆ ತಂದ ರಾಜ್ಯ ಕರ್ನಾಟಕವಾಗಿದೆ. ಆದರೂ ಓಲಾ ತಮಿಳುನಾಡನ್ನು ಆಯ್ಕೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ತ್ವರಿತವಾಗಿ ಗಮನ ಸೆಳೆದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕದ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ(Priyank Kharge), ‘‘ಬಿಜೆಪಿ ಸರಕಾರವಿರುವ ಕರ್ನಾಟಕದಲ್ಲಿ ಸುಲಭವಾಗಿ ಉದ್ಯಮ ನಡೆಸಲು ಸಾಧ್ಯವಿದೆ ಎಂಬುದು ಮಿಥ್ಯೆ ಎನ್ನುವುದನ್ನು ಓಲಾ ತಮಿಳುನಾಡಿನಲ್ಲಿ ಹೂಡಿಕೆ ಮಾಡುತ್ತಿರುವುದು ತೋರಿಸಿ ಕೊಟ್ಟಿದೆ. ಹೂಡಿಕೆ ಹಾಗೂ ಉದ್ಯೋಗ ನಷ್ಟವಾಗಿರುವುದಕ್ಕೆ ಯಾರು ಹೊಣೆ ?’’ ಎಂದು ಪ್ರಶ್ನಿಸಿದ್ದಾರೆ. ‘‘ಬೆಂಗಳೂರಿನಲ್ಲಿ ತನ್ನ ನೆಲೆ ಕಳೆದುಕೊಂಡ ಓಲಾ ಈಗ ತಮಿಳುನಾಡಿನಲ್ಲಿ ಹೂಡಿಕೆ ಮಾಡುತ್ತಿದೆ ಹಾಗೂ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ.
ಕರ್ನಾಟಕದ ಅಸಮರ್ಪಕ ನೀತಿ, ಹೂಡಿಕೆದಾರರನ್ನು ಮನವೊಲಿಸಲು ಹಾಗೂ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಪೂರೈಸಲು ವಿಫಲವಾಗಿರುವುದು ಇದಕ್ಕೆ ಕಾರಣ’’ ಎಂದು ಪ್ರಿಯಾಂಕಾ ಖರ್ಗೆ ಹೇಳಿದ್ದಾರೆ. ತಮಿಳುನಾಡಿನಲ್ಲಿ ಆರಂಭವಾಗಲಿರುವ ತನ್ನ ಇಲೆಕ್ಟ್ರಿಕ್ ವಾಹನಗಳ ಕೇಂದ್ರದಲ್ಲಿ ಓಲಾ ಇಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು 2023ರಲ್ಲಿ ಆರಂಭಿಸಲಿದೆ.







