ಸುಪ್ರೀಂ ಕೋರ್ಟ್ ಕಲಾಪಗಳ ಭಾಷಾಂತರಕ್ಕೆ ಚಾಲನೆ

ಹೊಸದಿಲ್ಲಿ,ಫೆ.21: ಇದೇ ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಲಯ(Supreme Court)ವು ಮಂಗಳವಾರದಿಂದ ಪ್ರಾಯೋಗಿಕ ನೆಲೆಯಲ್ಲಿ ತನ್ನ ಕಲಾಪಗಳ ಭಾಷಾಂತರಕ್ಕೆ ಕೃತಕ ಬುದ್ಧಿಮತ್ತೆ (AI) ಮತ್ತು ನೈಸರ್ಗಿಕ ಭಾಷಾ ಸಂಸ್ಕರಣೆ ತಂತ್ರಜ್ಞಾನವನ್ನು ಬಳಸಲು ಆರಂಭಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್(DY Chandrachud) ಅವರ ನ್ಯಾಯಾಲಯ ಕೊಠಡಿಯಲ್ಲಿ ನೇರ ಲಿಪ್ಯಂತರಕ್ಕೆ ಚಾಲನೆ ನೀಡಲಾಯಿತು.
ಮಂಗಳವಾರದಿಂದ ಸಂವಿಧಾನ ಪೀಠದ ಕಲಾಪಗಳ ನೇರ ಲಿಪ್ಯಂತರವನ್ನು ಆರಂಭಿಸಲಾಗಿದೆ. ಲಿಪ್ಯಂತರಗಳನ್ನು ವಕೀಲರಿಗೆ ನೀಡಲಾಗುತ್ತದೆ ಮತ್ತು ಅವರು ಅವುಗಳನ್ನು ಪರಿಶೀಲಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯದ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ.
ಒಂದೆರಡು ದಿನಗಳ ಕಾಲ ಲಿಪ್ಯಂತರವನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕಂಡು ಬರುವ ನ್ಯೂನತೆಗಳನ್ನು ಪರಿಹರಿಸಿದ ಬಳಿಕ ನಿಯಮಿತವಾಗಿ ಮುಂದುವರಿಯಲಿದೆ ಎಂದು ನ್ಯಾ.ಚಂದ್ರಚೂಡ್ ತಿಳಿಸಿದರು.
Next Story





