ಬಿಜೆಪಿ ನಾಯಕರಿಂದ ಡಿಕೆಶಿ, ಸಿದ್ದರಾಮಯ್ಯರನ್ನು ಕೊಲ್ಲುವ ಬೆದರಿಕೆ: ರಣದೀಪ್‍ಸಿಂಗ್ ಸುರ್ಜೆವಾಲಾ

ಮಂಡ್ಯ, ಫೆ.21: ಮುಂಬರುವ ಚುನಾವಣೆಯಲ್ಲಿ ಸೋಲುವುದು ಸೋಲುವುದು ಖಚಿತವೆಂದು ಹತಾಶರಾಗಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರನ್ನು ಮುಗಿಸುವ ಮಾತನಾಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ವಾಗ್ದಾಳಿ ನಡೆಸಿದ್ದಾರೆ.
ನಗರದ ಕರ್ನಾಟಕ ಸಂಘದ ಆವರಣದಲ್ಲಿ ಮಂಗಳವಾವರ ನಡೆದ ಕಾಂಗ್ರೆಸ್ ಪಕ್ಷದ ಭರವಸೆಯ ಕಾರ್ಡ್ ವಿತರಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಏನೇ ತಂತ್ರ ಉಪಯೋಗಿಸಿದರೂ ಕಾಂಗ್ರೆಸ್ ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಇವತ್ತು ಇಡೀ ರಾಷ್ಟ್ರಕ್ಕೆ ಮಾದರಿ ರಾಜ್ಯ ಎಂಬುದನ್ನು ನಮ್ಮ ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ. ಯಾವ ಪಕ್ಷದವರೂ ಮಾಡಿಲ್ಲದ ವಿನೂತನ ಕಾರ್ಯಕ್ರಮ. ಜಾತಿ, ಧರ್ಮ, ವರ್ಗ, ಪ್ರದೇಶಕ್ಕೆ ಸೀಮಿತವಾದುದಲ್ಲ. ಮಂಡ್ಯ ಜಿಲ್ಲಾ ಏಳು ಸ್ಥಾನಗಳನ್ನು ಗೆಲ್ಲುವ ಶಕ್ತಿ ನಿಮ್ಮ ಕೈಯಲ್ಲಿದೆ.
ಪಂಜಾಬ್‍ನ ಬೇಹಂತ್‍ಸಿಂಗ್, ಮಧ್ಯಪ್ರದೇಶದ ವಿ.ಸಿ.ಶುಕ್ಲಾ, ಚತ್ತೀಷ್‍ಘಟದ ಮಹೇಂದ್ರವರ್ಮ, ನಂದಕುಮಾರ್ ನಂದಕುಮಾರ್ ಪಟೇಲ್ ಮುಂತಾದ ಕಾಂಗ್ರೆಸ್ ನಾಯಕರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಕೊಲ್ಲುವುದಕ್ಕೆ ಪ್ರಚೋದನೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಸರಕಾರ ಜನರಪರ ಕಾರ್ಯಕ್ರಮಗಳನ್ನು ಕೊಡುವಲ್ಲಿ ವಿಫಲವಾಗಿದೆ. ತಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಬದಲಾಗಿ, ಬೇರೆ ವಿಚಾರಗಳ ಮೂಲಕ ಜನರ ಮನಸ್ಸನ್ನು ತಿರುಗಿಸಿ ಮತ್ತೆ ಗೆಲ್ಲುವ ಯತ್ನ ನಡೆಸುತ್ತಿದೆ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಬಡವರ, ದೀನದಲಿತರ, ಎಲ್ಲ ಧರ್ಮ, ವರ್ಗದ ಹಿತವನ್ನು ಬಯಸುವ ಪಕ್ಷ. ಇದಕ್ಕೆ ಕಾಂಗ್ರೆಸ್ ಸರಕಾರದಲ್ಲಿ ಜಾರಿಗೆ ತಂದಿರುವ ಯೋಜನೆಗಳು, ಕಾರ್ಯಕ್ರಮಗಳು ಸಾಕ್ಷಿಯಾಗಿವೆ. ಹಾಗಾಗಿ ಜನತೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ತೀರ್ಮಾನಿಸಿದ್ದಾರೆ ಎಂದು ಅವರು ಹೇಳಿದರು.
ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಪಕ್ಷವು ಪ್ರತಿಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂ. ಕೊಡುವುದಾಗಿ ಘೋಷಿಸಿ ಅನುಷ್ಠಾನಕ್ಕೆ ತರುವ ಸ್ಪಷ್ಟ ಭರವಸೆ ನೀಡಿದೆ. ಇದು ಇಡೀ ದೇಶಕ್ಕೇ ಮಾದರಿಯಾದ ಯೋಜನೆಯಾಗಿದೆ ಎಂದು ಅವರು ವಿವರಿಸಿದರು.
ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನೀಡಿರುವ ಭರವಸೆಯ ಯೋಜನೆಯ ಕಾರ್ಡ್‍ಗಳನ್ನು ತಂಡಗಳ ರಚನೆ ಮಾಡಿಕೊಂಡು ವಾರದೊಳಗೆ ಪ್ರತಿ ಮನೆಗೆ ತಲುಪಿಸಬೇಕು. ಈ ಯೋಜನೆಗಳು ಸರಕಾರ ಬಂದ ಮೊದಲನೇ ದಿನವೇ ಅನುಷ್ಠಾನಕ್ಕೆ ಬರುವುದನ್ನು ಖಾತ್ರಿ ಪಡಿಸಬೇಕು ಎಂದು ಅವರು ಪಕ್ಷದ ಮುಖಂಡರಿಗೆ ಸಲಹೆ ನೀಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಎಐಸಿಸಿ ವೀಕ್ಷಕ ರೋಜಿಜಾನ್, ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ, ಮಧು ಮಾದೇಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ರಮೇಶ್ ಬಂಡಿಸಿದ್ದೇಗೌಡ, ಕೆಪಿಸಿಸಿ ಮಹಿಳಾಧ್ಯಕ್ಷೆ ಪುಷ್ಪ ಅಮರನಾಥ್, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ದಡದಪುರ ಶಿವಣ್ಣ, ಸಚ್ಚಿನ್‍ಮಿಗಾ, ಎಸ್.ಗುರುಚರಣ್, ಗಣಿಗ ರವಿಕುಮಾರ್, ಕೆ.ಕೆ.ರಾಧಾಕೃಷ್ಣ, ಡಾ.ಎಚ್.ಕೃಷ್ಣ, ರುದ್ರಪ್ಪ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.
“ಬಸವರಾಜ ಬೊಮ್ಮಾಯಿ, ಜೆ.ಪಿ.ನಡ್ಡಾ ಅವರೇ ನೀವು ಹೇಳಿದ ಸ್ಥಳಕ್ಕೆ, ನಿಗದಿಪಡಿಸಿದ ವೇಳೆಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ನಾವು ಕರೆದುಕೊಂಡು ಬರುತ್ತೇವೆ, ತಾಕತ್ತಿದ್ದರೆ ಹತ್ಯೆ ಮಾಡಿ ನೋಡೋಣ.”
-ರಣದೀಪ್‍ಸಿಂಗ್ ಸುರ್ಜೆವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ.








