ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಳಂಬ: ಪರಿಷತ್ತಿನಲ್ಲಿ ಕಾಂಗ್ರೆಸ್ ಸಭಾತ್ಯಾಗ

ಬೆಂಗಳೂರು, ಫೆ.21: ಚುನಾವಣೆ ನಡೆದು ಒಂದು ವರ್ಷ ಕಳೆದರೂ ರಾಜ್ಯದ 55 ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಳಂಬ ಕಾರಣಕ್ಕಾಗಿ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿ ಹೊರನಡೆದರು.
ಮಂಗಳವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪ ವೇಳೆ ಸದಸ್ಯ ಎಸ್.ರವಿ, ಒಂದು ವರ್ಷ ಕಳೆದರೂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾಡಿಲ್ಲ. ಇದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಕುಂಠಿತವಾಗಿದೆ. ಇದನ್ನು ಸರಕಾರದ ವೈಫಲ್ಯ ದೌರ್ಬಲ್ಯ ಎನ್ನಬೇಕೋ ಅರ್ಥವಾಗುತ್ತಿಲ್ಲ ಎಂದರು.
ಇದಕ್ಕೆ ಸಚಿವ ಎಂಟಿಬಿ ನಾಗರಾಜ್ ಉತ್ತರ ನೀಡಿ, ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಾಗಿಲ್ಲ ನಿಜ. ಆದರೆ, ಈ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸರಕಾರ ಮಂಜೂರು ಮಾಡಿದ ಯಾವುದೇ ಕಾರ್ಯಕ್ರಮಗಳು ಅನುಷ್ಠಾನ ವಿಳಂಬವಾಗಿಲ್ಲ. ಅಧಿಕಾರಿಗಳ ಮೂಲಕ ಎಲ್ಲ ಕೆಲಸ ನಡೆಯುತ್ತಿವೆ ಎಂದರು.
ಈಗಾಗಲೇ 30 ತಿಂಗಳ ಅಧಿಕಾರ ಮುಗಿದಿರುವ ಸ್ಥಳೀಯ ಸಂಸ್ಥೆಗಳಿಗೆ ಹೊಸದಾಗಿ ಮೀಸಲಾತಿ ನಿಗದಿಪಡಿಸುವುದು ಸೇರಿದಂತೆ ಇನ್ನಿತರೆ ವಿಷಯಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸರಕಾರ ಬದ್ಧವಾಗಿದೆ ಎಂದ ಅವರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡದ ಹೊರತು ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಬಾರದು ಎನ್ನುವ ವಿಷಯ ಸುಪ್ರೀಂಕೋರ್ಟ್‍ನಲ್ಲಿದೆ. ಹೀಗಾಗಿ ವಿಳಂಬವಾಗಿದೆ. ಸರಕಾರ ಕೂಡಾ ಭಕ್ತವತ್ಸಲಂ ಆಯೋಗ ರಚನೆ ಮಾಡಿತ್ತು ಆಯೋಗ ನೀಡಿದ ವರದಿಯನ್ನು ಹೈಕೋರ್ಟ್‍ನಲ್ಲಿ ಸಲ್ಲಿಸಲಾಗಿತ್ತು.
ಅದು ವಜಾಗೊಂಡ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ತನಕ ಹೋಗಿದೆ. ನನ್ನ ಕ್ಷೇತ್ರ ಹೊಸಪೇಟೆಯಲ್ಲು ಕೂಡಾ ಅಧ್ಯಕ್ಷ ಉಪಾಧ್ಯಕ್ಷರ ಅವಧಿ ಮುಗಿದು 30 ತಿಂಗಳು ಕಳೆದರೂ ಇನ್ನೂ ನೇಮಕವಾಗಿಲ್ಲ. ಸರಕಾರ ಶೀಘ್ರದಲ್ಲೇ ಈ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಳಿಕಎಸ್.ರವಿ ಅವರು, ಇನ್ನೂ 15 ದಿನಗಳಲ್ಲಿ ವಿಧಾನಸಭೆಯ ನೀತಿ ಸಂಹಿತೆ ಜಾರಿ ಬರಲಿದೆ. ಯಾವಾಗ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಎದ್ದು ನಿಂತ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಉತ್ತರ ನೀಡಲು ಮುಂದಾಗುತ್ತಿದ್ದಂತೆಯೇ ಸದಸ್ಯ ರವಿ ಅವರು, ಸಚಿವರು ಸಮರ್ಥರಾಗಿದ್ದಾರೆ. ಅವರು ಉತ್ತರ ಕೊಡುತ್ತಾರೆ. ಅವರು ಸಮರ್ಥರಲ್ಲದಿದ್ದರೆ ನೀವು ಉತ್ತರ ಕೊಡಿ ಎಂದು ಪ್ರತಿಕ್ರಿಯಿಸಿದರು.
ಆಗವಿರೋಧ ಪಕ್ಷದ ನಾಯಕ ಬಿ.ಕೆಪ್ರಸಾದ್ ಮಧ್ಯ ಪ್ರವೇಶಿಸಿ, ಸಂವಿಧಾನದ 73-74ನೆ ತಿದ್ದುಪಡಿ ಅನ್ವಯ ಆರು ತಿಂಗಳಿಗಿಂತ ಹೆಚ್ಚು ಸಮಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವನ್ನು ಖಾಲಿ ಬಿಡಬಾರದು ಎಂದು ಇದೆ. ಮೀಸಲಾತಿ ವಿಷಯ ಸುಪ್ರೀಂಕೋರ್ಟ್‍ನಲ್ಲಿದ್ದಾಗಲೂ ದೇಶದ ಹಲವು ರಾಜ್ಯಗಳು ಚುನಾವಣೆ ನಡೆಸಿವೆ. ರಾಜ್ಯದಲ್ಲಿ ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಧ್ಯ ಪ್ರವೇಶಿಸಿ, ಪ್ರತಿಪಕ್ಷಗಳ ಸದಸ್ಯರು ಹೇಳುವ ಮಾತಿನಲ್ಲಿ ಸತ್ಯವಿದೆ. ಪ್ರಕರಣ ಸುಪ್ರೀಂ ಕೋರ್ಟಿನಲ್ಲಿರುವಾಗ ನಾವು ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ ಎಂದರು.
ಈ ಹಂತದಲ್ಲಿ ಸಚಿವ ಎಂಟಿಬಿ ನಾಗರಾಜ್, ತಮ್ಮ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಮುಂದಾಗುತ್ತಿದ್ದಂತೆಯೇ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ ನಡೆದು ಪ್ರತಿಪಕ್ಷ ನಾಯಕ ಬಿ.ಕೆ. ಹ ರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.







