ಮೋದಿ ಆಡಳಿತದಿಂದ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹೆಚ್ಚಾಗಿದೆ: ಜೆ.ಪಿ.ನಡ್ಡಾ

ಚಿಕ್ಕಮಗಳೂರು, ಫೆ.21: ಕಳೆದ 9 ವರ್ಷಗಳ ಹಿಂದೆ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಗೌರವವಿರಲಿಲ್ಲ. ಆದರೆ ಕಳೆದ 8 ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದಾಗಿ ದೇಶ ಭ್ರಷ್ಟಾಚಾರ ಮುಕ್ತವಾಗಿದ್ದು, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹೆಚ್ಚಾಗಿದೆ. ಪ್ರಧಾನಿ ಮೋದಿ ಆಡಳಿತದಿಂದಾಗಿ ಭಾರತ ವಿಶ್ವಗುರುವಾಗುವಾಗುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಮಂಗಳವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ವೃತ್ತಿಪರರು ಮತ್ತು ಚಿಂತಕರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೊರೋನ ಸಾಂಕ್ರಾಮಿಕ ರೋಗ ಹಾಗೂ ಉಕ್ರೇನ್-ರಷ್ಯಾ ಯುದ್ದದಿಂದಾಗಿ ಯೂರೋಪ್, ಅಮೇರಿಕದಂತಹ ಬಲಿಷ್ಠ ದೇಶಗಳೂ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಆಡಳಿತದಿಂದಾಗಿ ದೇಶದ ಅರ್ಥ ವ್ಯವಸ್ಥೆ ಸಮತೋಲನ ಕಾಯ್ದುಕೊಂಡಿದೆ. ದೇಶ ಅರ್ಥಿಕವಾಗಿ ಸ್ಥಿರತೆ ಕಾಯ್ದುಕೊಂಡ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ ಎಂದರು.
ಕೊರೋನ ಸಾಂಕ್ರಾಮಿಕ ರೋಗದ ಸಮಯದಲ್ಲಿ ಪಿಎಂ ಗರೀಬ್ ಕಲ್ಯಾಣ್ ಯೋಜನೆ ಮೂಲಕ ಉಚಿತ ಪಡಿತರ ನೀಡಿದ್ದರಿಂದ ಬಡಜನರ ಹಸಿವಿನಿಂದ ಬಳಲದಂತೆ ಕ್ರಮವಹಿಸಿದ್ದರು. ಕೊರೋನ ಸಂದರ್ಭದಲ್ಲಿ ದೇಶಾದ್ಯಂತ ಅಭಿವೃದ್ಧಿ ಕೆಲಸಗಳು ನಿಲ್ಲದ ಪರಿಣಾಮ ನಿರುದ್ಯೋಗ ದೇಶವನ್ನು ಕಾಡಲಿಲ್ಲ ಎಂದರು.
ಬಿಜೆಪಿ ಸರಕಾರ ಮಹಿಳೆಯರು, ಬಡವರು, ಕಾರ್ಮಿಕರು, ರೈತರೂ ಸೇರಿದಂತೆ ಎಲ್ಲ ವರ್ಗಗಳ ಹಿತಕ್ಕನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಪಿಎಂ ಕಿಸಾನ್ ಯೋಜನೆ, ಫಸಲ್‌ಬಿಮಾ ಯೋಜನೆಯಂತಹ ಯೋಜನೆಗಳ ಮೂಲಕ ದೇಶದ ರೈತರ ಸ್ವಾವಲಂಬಿ ಜೀವನಕ್ಕೆ ಪೂರಕವಾಗಿ ಕೇಂದ್ರ ಸರಕಾರ ಕೆಲಸ ಮಾಡುತ್ತಿದೆ. ವಿದ್ಯುತ್ ಕ್ಷೇತ್ರದಲ್ಲೂ ಸ್ವಾವಲಂಬಿಯಾಗಿರುವ ದೇಶ ಉಜಾಲಾ ಯೋಜನೆ, ಸೌಭಾಗ್ಯ ಯೋಜನೆ ಮೂಲಕ ದೇಶದ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ರಾಜ್ಯದ ಬಿಜೆಪಿ ಸರಕಾರದಲ್ಲಿ ಸಿಎಂ ಬೊಮ್ಮಾಯಿ ಅವರು ಈ ಬಾರಿ ಜನಪರವಾದ ಬಜೆಟ್ ಮಂಡಿಸಿ ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳ ಪರನಾದ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರಕಾರ ಜನಹಿತ ಉದ್ದೇಶದಿಂದ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಸಭೆ ಸದಸ್ಯ ಅರುಣ್‌ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್, ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್, ಶಾಸಕರಾದ ಸುರೇಶ್, ಬೆಳ್ಳಿಪ್ರಕಾಶ್, ಕುಮಾರಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪಇದ್ದರು.







