ಸಾನಿಯಾರ ಭವ್ಯ ಕ್ರೀಡಾ ಬದುಕು ಮುಕ್ತಾಯ: ದುಬೈ ಚಾಂಪಿಯನ್ಶಿಪ್ನಲ್ಲಿ ಮೊದಲ ಸುತ್ತಿನಲ್ಲೇ ಸೋಲು
ದುಬೈ: ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾರ ಭವ್ಯ ವೃತ್ತಿಪರ ಕ್ರೀಡಾ ಬದುಕು ಮಂಗಳವಾರ ಕೊನೆಗೊಂಡಿತು. ಅವರು ತನ್ನ ಕೊನೆಯ ವೃತ್ತಿಪರ ಪಂದ್ಯವನ್ನು ಡಬ್ಲ್ಯುಟಿಎ ದುಬೈ ಡ್ಯೂಟಿ ಫ್ರೀ ಚಾಂಪಿಯನ್ಶಿಪ್ಸ್ನಲ್ಲಿ ಆಡಿದರು. ದುಬೈನಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಮಹಿಳೆಯರ ಡಬಲ್ಸ್ ವಿಭಾಗದ ಆರಂಭಿಕ ಸುತ್ತಿನಲ್ಲಿ ಸಾನಿಯಾ ಮತ್ತು ಅವರ ಜೊತೆಗಾತಿ ಅಮೆರಿಕದ ಮ್ಯಾಡಿಸನ್ ಕೀಸ್ ರಶ್ಯದ ಜೋಡಿ ವೆರ್ನೋಕಿಯ ಕುದೆರ್ಮೆಟೋವ ಮತ್ತು ಲಿಯುಡಿಮಿಲ ಸಮ್ಸೊನೋವ ವಿರುದ್ಧ 4-6, 0-6 ನೇರ ಸೆಟ್ಗಳಿಂದ ಪರಾಭವಗೊಂಡರು. ಪಂದ್ಯವು ಒಂದು ಗಂಟೆಯಲ್ಲೇ ಮುಗಿಯಿತು.
2003ರಲ್ಲಿ ವೃತ್ತಿಪರ ಟೆನಿಸ್ಗೆ ಕಾಲಿಟ್ಟ ಸಾನಿಯಾ ಆರು ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇದರಲ್ಲಿ ಮೂರು ಪ್ರಶಸ್ತಿಗಳು ಸ್ವಿಟ್ಸರ್ಲ್ಯಾಂಡ್ನ ಮಾರ್ಟಿನಾ ಹಿಂಗಿಸ್ ಜೊತೆಗೆ ಆಡಿರುವ ಮಹಿಳಾ ಡಬಲ್ಸ್ ಪ್ರಶಸ್ತಿಗಳು.
ಅವರು ತನ್ನ ಮೂರು ಮಿಶ್ರ ಡಬಲ್ಸ್ ಪ್ರಶಸ್ತಿಗಳ ಪೈಕಿ ಎರಡನ್ನು ತನ್ನದೇ ದೇಶದ ಮಹೇಶ್ ಭೂಪತಿ ಜೊತೆಗೆ ಆಡಿ ಗೆದ್ದಿದ್ದಾರೆ.
Next Story