Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಸೌಹಾರ್ದವೇ ಅಪರಾಧವಾದರೆ?

ಸೌಹಾರ್ದವೇ ಅಪರಾಧವಾದರೆ?

22 Feb 2023 9:57 AM IST
share
ಸೌಹಾರ್ದವೇ  ಅಪರಾಧವಾದರೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

​

ಗೋರಕ್ಷಕರ ವೇಷದಲ್ಲಿ , ಸಂಸ್ಕೃತಿ ರಕ್ಷಕರ ವೇಷದಲ್ಲಿ ನಡೆಸುವ ದಾಂಧಲೆಗಳಿಗೆ ಪೊಲೀಸ್ ಇಲಾಖೆ ಕರಾವಳಿಯಲ್ಲಿ ಅನಧಿಕೃತ ಮಾನ್ಯತೆಯೊಂದನ್ನು ನೀಡಿ ವರ್ಷಗಳು ಕಳೆದಿವೆ. ಇಲ್ಲಿ ರೈತರು ತಮ್ಮ ಗೋವುಗಳನ್ನು ಸಾಗಾಟ ಮಾಡುವಾಗ ಅದನ್ನು ತಡೆಯುವ, ಅವರ ಮೇಲೆ ಹಲ್ಲೆ ನಡೆಸುವ, ಅವರಿಂದ ದರೋಡೆ ಮಾಡುವ ಅನಧಿಕೃತ ಪರವಾನಿಗೆಯನ್ನು ಪೊಲೀಸ್ ಇಲಾಖೆ ಸಂಘಪರಿವಾರದ ದುಷ್ಕರ್ಮಿಗಳಿಗೆ ನೀಡಿದೆ ಎಂದು ಶ್ರೀಸಾಮಾನ್ಯರು ಆರೋಪಿಸುತ್ತಿದ್ದಾರೆ. ಆದುದರಿಂದಲೇ ಇಂತಹ ಘಟನೆಗಳು ನಡೆದಾಗ ಹಲ್ಲೆ ನಡೆಸಿದ ದುಷ್ಕರ್ಮಿಗಳ ಮೇಲೆ ಪ್ರಕರಣ ದಾಖಲಾಗದೆ, ಹಲ್ಲೆಗೊಳಗಾಗುವ ವ್ಯಾಪಾರಿಗಳು ಅಥವಾ ರೈತರ ಮೇಲೆಯೇ ಪ್ರಕರಣ ದಾಖಲಾಗುತ್ತದೆ. ‘ಸಾರ್ವಜನಿಕವಾಗಿ ಒಂದು ವಾಹನವನ್ನು ತಡೆದು ರೈತರಿಗೆ, ವ್ಯಾಪಾರಿಗಳಿಗೆ ಹಲ್ಲೆ ನಡೆಸುವ, ಯುವ ಜೋಡಿಗಳ ಮೇಲೆ ದೌರ್ಜನ್ಯ ಎಸಗುವ ಅಧಿಕಾರವನ್ನು ನಿಮಗೆ ನೀಡಿದವರು ಯಾರು?’ ಎನ್ನುವ ಸಣ್ಣ ಪ್ರಶ್ನೆಯನ್ನು ಕೂಡ ಪೊಲೀಸರು ದುಷ್ಕರ್ಮಿಗಳ ಬಳಿ ಕೇಳುವುದಿಲ್ಲ. ಅಂತಹ ಒಂದು ಪ್ರಶ್ನೆಯನ್ನು ಜೋರು ಧ್ವನಿಯಲ್ಲಿ ಕೇಳಿದ್ದಿದ್ದರೆ, ಅನೈತಿಕ ಪೊಲೀಸರ ಗೂಂಡಾಗಿರಿ ಶೇ. ೫೦ರಷ್ಟು ಕಡಿಮೆಯಾಗಿ ಬಿಡುತ್ತಿತ್ತು. ಆದುದರಿಂದಲೇ, ಇಂದು ಯುವಕರು ಖಾಕಿ ಸಹಿತ ಪೊಲೀಸರಾಗುವುದಕ್ಕಿಂತ, ಖಾಕಿ ರಹಿತ ಪೊಲೀಸರಾಗುವುದು ಸುಲಭ ಎನ್ನುವುದನ್ನು ಕಂಡುಕೊಂಡಿದ್ದಾರೆ. ಉನ್ನತ ಶಿಕ್ಷಣ ಪಡೆದು, ದೈಹಿಕ ಮೈಕಟ್ಟು ಬೆಳೆಸಿ ಕಷ್ಟಪಟ್ಟು ಪೊಲೀಸರಾಗುವ ಬದಲು, ಯಾವುದೋ ಒಂದು ಸಂಘಪರಿವಾರ ಸಂಘಟನೆಗೆ ಸೇರಿ, ಕ್ರಿಮಿನಲ್‌ಗಳ ಜೊತೆಗೆ ಕೈಜೋಡಿಸಿ ‘ಗೋರಕ್ಷಕ’ ‘ಸಂಸ್ಕೃತಿ ರಕ್ಷಕ’ರಾಗುವುದು ಸುಲಭ ಎನ್ನುವುದನ್ನು ಕರಾವಳಿಯಲ್ಲಿ ಯುವಕರು ಎಂದೋ ಅರ್ಥ ಮಾಡಿಕೊಂಡಿದ್ದಾರೆ. ಹಿಂದೆಲ್ಲ ಇಂಥವರು ರೌಡಿಶೀಟರ್‌ಗಳಾಗಿ ಸಮಾಜದಿಂದ ಬಹಿಷ್ಕೃತರಾಗುತ್ತಿದ್ದರು. ಮುಖ್ಯ ವಾಹಿನಿ ಇವರನ್ನು ದೂರವಿಡುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಈ ಕ್ರಿಮಿನಲ್‌ಗಳೇ ಸಮಾಜದ ಮುಖ್ಯವಾಹಿನಿಯಾಗಿ ಬದಲಾಗಿದ್ದಾರೆ. ಸಭ್ಯರಾಗಿ ಬದುಕುವುದು ‘ಅಪರಾಧ’ ಎಂದು ಬಿಂಬಿತವಾಗುತ್ತಿದೆ.

ವಿಪರ್ಯಾಸವೆಂದರೆ, ಒಂದೆಡೆ ಕ್ರಿಮಿನಲ್‌ಗಳಿಗೆ ಪೊಲೀಸ್ ಇಲಾಖೆ ಮಾನ್ಯತೆಯನ್ನು ನೀಡುತ್ತಿದ್ದರೆ, ಇತ್ತ ಸಮಾಜದ ಒಳಿತಿಗಾಗಿ ಶ್ರಮಿಸುವ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತುಡಿಯುವವರು ‘ಅಪರಾಧಿ’ಗಳಾಗಿ ಗುರುತಿಸಲ್ಪಡುತ್ತಿದ್ದಾರೆ. ಇಂದು ನೀವು ಸಾರ್ವಜನಿಕವಾಗಿ ದ್ವೇಷಪೂರಿತ ಭಾಷಣಗಳನ್ನು ಮಾಡಬಹುದು. ಅಮಾಯಕರ ಮೇಲೆ ದಾಳಿಗಳನ್ನು ನಡೆಸಬಹುದು. ನಿಮ್ಮ ಮೇಲೆ ಯಾವುದೇ ಪ್ರಕರಣ ದಾಖಲಾಗುವುದಿಲ್ಲ. ಜನರನ್ನು ಜಾತಿ, ಧರ್ಮದ ಹೆಸರಿನಲ್ಲಿ ವಿಭಜಿಸುವುದು ಸಮಾಜ ಕಟ್ಟುವ ಕೆಲಸವಾಗಿ ಗುರುತಿಸಲ್ಪಡುತ್ತಿದೆ. ಇದೇ ಸಂದರ್ಭದಲ್ಲಿ ಜಾತಿ, ಧರ್ಮಗಳನ್ನು ಮೀರಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನೆರವಾಗುವುದು ಸಮಾಜಬಾಹಿರ ಕೆಲಸವಾಗಿ ಪರಿಗಣಿತವಾಗುತ್ತಿದೆ. ಇಂದು ಎಳೆ ವಿದ್ಯಾರ್ಥಿಗಳ ಕೈಗೆ ಒಂದೆಡೆ ಚಾಕು, ಚೂರಿಗಳನ್ನು ನೀಡುವ ಕೆಲಸ ನಡೆಯುತ್ತಿದೆ. ಆದರೆ ಪೊಲೀಸರು ಕಣ್ಣಿದ್ದೂ ಕುರುಡರಾಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಕಾರ್ಯಾಗಾರ ನಡೆಸಿದರೆ ಅದು ಅಪರಾಧವಾಗುತ್ತದೆ. ಅಲ್ಲಿಗೆ ಸಂಘಪರಿವಾರ ದುಷ್ಕರ್ಮಿಗಳು ದಾಳಿ ನಡೆಸುತ್ತಾರೆ. ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ, ದಾಳಿ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕೇಸು ದಾಖಲಿಸಬೇಕಾದ ಪೊಲೀಸರು ಶೈಕ್ಷಣಿಕ ಕಾರ್ಯಾಗಾರ ನಡೆಸಿದ ಸಂಘಟಕರ ಮೇಲೆಯೇ ಪ್ರಕರಣ ದಾಖಲಿಸುತ್ತಾರೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ನುಸ್ರತುಲ್ ಇಸ್ಲಾಮ್ ಯಂಗ್‌ಮೆನ್ಸ್ ಅಸೋಸಿಯೇಶನ್ ಸಾರ್ವಜನಿಕ ಹಾಲ್ ಒಂದರಲ್ಲಿ ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರವೊಂದನ್ನು ಹಮ್ಮಿಕೊಂಡಿತ್ತು. ಕಾರ್ಯಾಗಾರದಲ್ಲಿ ೬೫ಕ್ಕೂ ಅಧಿಕ ಸ್ಥಳೀಯ ವಿದ್ಯಾರ್ಥಿಗಳು ಧರ್ಮಾತೀತವಾಗಿ ಭಾಗವಹಿಸಿದ್ದರು. ಕಾರ್ಯಾಗಾರ ಗುಟ್ಟಾಗಿ, ಯಾವುದೋ ಖಾಸಗಿ ಕೊಠಡಿಯಲ್ಲಿ ನಡೆಯುತ್ತಿರಲಿಲ್ಲ. ಕಾರ್ಯಾಗಾರವನ್ನು ಎಲ್ಲರಿಗೂ ಮುಕ್ತವಾಗಿ ತೆರೆದಿಡಲಾಗಿತ್ತು. ಇಂತಹ ಸ್ಥಳಕ್ಕೆ ನುಗ್ಗಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರೆಂದು ಗುರುತಿಸಿಕೊಂಡ ಕೆಲವರು ‘‘ಕಾರ್ಯಾಗಾರದಲ್ಲಿರುವ ಹಿಂದೂ ವಿದ್ಯಾರ್ಥಿಗಳು ಹೊರ ಬನ್ನಿ’’ ಎಂದು ಬೆದರಿಕೆ ಒಡ್ಡಿದ್ದಾರೆ. ಮುಖ್ಯವಾಗಿ ಅದೊಂದು ಶೈಕ್ಷಣಿಕ ಕಾರ್ಯಾಗಾರ. ಅದರಲ್ಲಿ ಭಾಗವಹಿಸಬೇಕೋ ಬೇಡವೋ ಎನ್ನುವುದನ್ನು ತೀರ್ಮಾನಿಸಬೇಕಾದವರು ವಿದ್ಯಾರ್ಥಿಗಳು ಅಥವಾ ಪೋಷಕರು. ಸಾಧಾರಣವಾಗಿ ಅಂತಹ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಿಕೊಡುವ ಮೊದಲು ಸಂಪನ್ಮೂಲ ವ್ಯಕ್ತಿಗಳ ಬಗ್ಗೆ ಮಾಹಿತಿಗಳನ್ನು ಅವರು ಪಡೆದುಕೊಳ್ಳುತ್ತಾರೆ. ಹೀಗಿರುವಾಗ, ಅಲ್ಲಿಗೆ ಸಂಘಪರಿವಾರದ ದುಷ್ಕರ್ಮಿಗಳು ನುಗ್ಗಿ ‘ಹಿಂದೂ ವಿದ್ಯಾರ್ಥಿಗಳು ಹೊರಗೆ ಬನ್ನಿ’ ಎಂದು ಕರೆ ನೀಡಲು ಆ ಸಂಘಟನೆಗೆ ಅಧಿಕಾರ ಕೊಟ್ಟವರು ಯಾರು? ಇಷ್ಟಕ್ಕೂ ವಿದ್ಯಾರ್ಥಿಗಳಲ್ಲಿ  ಹಿಂದೂ ವಿದ್ಯಾರ್ಥಿಗಳು-ಮುಸ್ಲಿಮ್ ವಿದ್ಯಾರ್ಥಿಗಳು ಎಂದು ಇರುತ್ತಾರೆಯೆ?

ಶಿಕ್ಷಣಕ್ಕೂ ಸಂಘಪರಿವಾರಕ್ಕೂ ಮಾರು ದೂರ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಸೂಕ್ತವಾದ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನದಂತಹ ಕಾರ್ಯಾಗಾರಗಳು ದೊರಕಿದ್ದರೆ ಈ ಹುಡುಗರು ಸಂಘಪರಿವಾರದಂತಹ ಸಂಘಟನೆಗಳನ್ನು ಸೇರುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಸೂಕ್ತ ಶಿಕ್ಷಣ ಪಡೆದು ಸಮಾಜದಲ್ಲಿ ನಾಗರಿಕರಾಗಿ ಬಾಳುವ ಅವಕಾಶ ಕಳೆದುಕೊಂಡ ಈ ಯುವಕರು, ಈಗ ನೋಡಿದರೆ ಉಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ಈ ದುಷ್ಕರ್ಮಿಗಳು ಸಾಂಕ್ರಾಮಿಕ ವೈರಸ್ ಅಂಟಿದ ‘ರೆಂಬಿ’ಗಳಾಗುತ್ತಿದ್ದಾರೆ. ತಾವೂ ರಾಕ್ಷಸರಾಗಿ, ಇತರರನ್ನೂ ತಮ್ಮಂತೆಯೇ ರಾಕ್ಷಸರನ್ನಾಗಿಸಲು ಹೊರಟಿದ್ದಾರೆ. ಇಂತಹ ಸಂದರ್ಭದಲ್ಲಿ ಶಿಕ್ಷಣ ಕಾರ್ಯಾಗಾರದಲ್ಲಿ ದಾಂಧಲೆ ನಡೆಸಿದ ದುಷ್ಕರ್ಮಿಗಳ ಮೇಲೆ  ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಆದರೆ ಸ್ಥಳೀಯ ಪೊಲೀಸರು ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಮಾತ್ರವಲ್ಲ, ಶೈಕ್ಷಣಿಕ ಕಾರ್ಯಾಗಾರ ನಡೆಸಿದ ಸಂಘಟಕರ ಮೇಲೆಯೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದುಷ್ಕರ್ಮಿಗಳು ಎಸಗಿದ ಕೃತ್ಯಕ್ಕಿಂತಲೂ ಹೀನಾಯವಾಗಿ ಸ್ಥಳೀಯ ಪೊಲೀಸರು ನಡೆದುಕೊಂಡಿದ್ದಾರೆ.

ಹಿಂದೂ ಜಾಗರಣಾ ವೇದಿಕೆಯ ದುಷ್ಕರ್ಮಿಗಳು ‘ಕಾರ್ಯಾಗಾರದಲ್ಲಿ ಧಾರ್ಮಿಕ ಪ್ರವಚನ ನೀಡಲಾಗುತ್ತಿತ್ತು’ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ. ಹಾಗೊಂದು ವೇಳೆ ಅಂತಹದು ಅಲ್ಲಿ ನಡೆಯುತ್ತದೆಯಾದರೆ ಅಲ್ಲಿಗೆ ವಿದ್ಯಾರ್ಥಿಗಳನ್ನು ಕಳುಹಿಸದೇ ಇರುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾದವರು ಆ ವಿದ್ಯಾರ್ಥಿಗಳ ಪೋಷಕರು. ವಿದ್ಯಾರ್ಥಿಗಳಾಗಲಿ, ಪೋಷಕರಾಗಲಿ ಈವರೆಗೆ ಅಂತಹ ಯಾವುದೇ ಆರೋಪವನ್ನು ಮಾಡಿಲ್ಲ. ಪೊಲೀಸರಿಗೆ ದೂರನ್ನೂ ನೀಡಿಲ್ಲ. ವಿದ್ಯಾರ್ಥಿಗಳ ಜೊತೆಗೆ ಯಾವ ಸಂಬಂಧವೂ ಇಲ್ಲದ, ಕ್ರಿಮಿನಲ್ ಹಿನ್ನೆಲೆಯಿರುವ ಕೆಲವು ದುಷ್ಕರ್ಮಿಗಳು ಮಾಡಿದ ಆರೋಪದ ಆಧಾರದಲ್ಲಿ ಪೊಲೀಸರು ಶೈಕ್ಷಣಿಕ ಕಾರ್ಯಾಗಾರ ನಡೆಸಿದ ಸಂಘಟಕರ ಮೇಲೆ ಮೊಕದ್ದಮೆ ದಾಖಲಿಸುತ್ತಾರೆ ಎಂದಾದರೆ, ಈ ಪೊಲೀಸರು ಸಮಾಜಕ್ಕೆ ಯಾವ ಸಂದೇಶವನ್ನು ನೀಡಲು ಹೊರಟಿದ್ದಾರೆ? ಸಮಾಜದಲ್ಲಿ ಶೈಕ್ಷಣಿಕ ಕಾರ್ಯಾಗಾರಗಳನ್ನು ನಡೆಸುವುದು ಅಪರಾಧವಾದರೆ, ಮುಂದಿನ ದಿನಗಳಲ್ಲಿ ಎಲ್ಲ ಶಾಲೆಗಳನ್ನು ಮುಚ್ಚಿಸುವುದೇ ಒಳಿತು. ಯಾಕೆಂದರೆ ಶಾಲೆಗಳಲ್ಲಿ ವಿವಿಧ ಧರ್ಮಗಳಿಗೆ ಸೇರಿದ ವಿದ್ಯಾರ್ಥಿಗಳು ಒಂದಾಗಿ ಪರಸ್ಪರ ಸೌಹಾರ್ದದಿಂದ ಬದುಕುವ ಸಾಧ್ಯತೆಗಳಿರುತ್ತವೆ. ಸೌಹಾರ್ದ ರಹಿತ ಸಮಾಜವನ್ನು ಕಟ್ಟುವುದು ಸರಕಾರದ ಗುರಿಯಾಗಿರುವಾಗ, ಅಂತಹ ಸಮಾಜದಲ್ಲಿ ಶಿಕ್ಷಣ ಅಪರಾಧವೆನಿಸಿಕೊಳ್ಳುವುದು ಸಹಜವೇ ಅಲ್ಲವೆ?

share
Next Story
X