ಅಶಿಸ್ತು ಗರಿಷ್ಠ ಮಟ್ಟದಲ್ಲಿರುವುದರಿಂದ ದಿಲ್ಲಿಗೆ ಬರಲು ನನಗೆ ಮುಜುಗರವಾಗುತ್ತದೆ: ನಾರಾಯಣ ಮೂರ್ತಿ

ದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ಸಂಚಾರ ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿರುವ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ(N. R. Narayana Murthy), ದಿಲ್ಲಿಯಲ್ಲಿ ಅಶಿಸ್ತು ಗರಿಷ್ಠ ಮಟ್ಟದಲ್ಲಿರುವುದರಿಂದ ದಿಲ್ಲಿಗೆ ಬರಲು ನನಗೆ ಮುಜುಗರವಾಗುತ್ತದೆ ಎಂದು ಮಂಗಳವಾರ ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.
ಅಖಿಲ ಭಾರತ ವ್ಯವಸ್ಥಾಪಕ ಒಕ್ಕೂಟದ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾರ್ವಜನಿಕ ಆಡಳಿತದಲ್ಲಿ ಅಪ್ರಮಾಮಾಣಿಕತೆಯನ್ನು ತಡೆಗಟ್ಟಲು ಜನರು ವೈಯಕ್ತಿಕ ಸಂಪತ್ತಿಗಿಂತ ಸಮುದಾಯದ ಸಂಪತ್ತನ್ನು ರಕ್ಷಿಸುವುದನ್ನು ಒಂದು ಮೌಲ್ಯವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
"ನನಗೆ ನಿಜಕ್ಕೂ ದಿಲ್ಲಿಗೆ ಬರಲು ಮುಜುಗರವಾಗುತ್ತದೆ. ಅಶಿಸ್ತು ಗರಿಷ್ಠ ಪ್ರಮಾಣದಲ್ಲಿರುವ ನಗರ ಇದಾಗಿದೆ. ಅದಕ್ಕೆ ಒಂದು ಉದಾಹರಣೆ ನೀಡುತ್ತೇನೆ. ನಾನು ನಿನ್ನೆ ವಿಮಾನ ನಿಲ್ದಾಣದಿಂದ ಬರುತ್ತಿದ್ದೆ. ಆಗ ಕೆಂಪು ದೀಪದ ಸೂಚನೆಯನ್ನು ಉಲ್ಲಂಘಿಸಿ ಹಲವಾರು ಕಾರುಗಳು, ಬೈಕ್‌ಗಳು ಮತ್ತು ಸ್ಕೂಟರ್‌ಗಳು ಯಾವುದೇ ಸಣ್ಣ ಜಾಗ್ರತೆಯೂ ಇಲ್ಲದೆ ಮುಂದೆ ಸಾಗುತ್ತಿದ್ದವು. ನಾವು ಮುಂದೆ ಸಾಗಲು ಒಂದೆರಡು ನಿಮಿಷ ಕಾಯಲೂ ಸಾಧ್ಯವಿಲ್ಲವೆ? ಇಂತಹ ಜನರು ಹಣವನ್ನು ಕಂಡಾಗ ಕಾಯುತ್ತಾರೆ ಎಂದು ಭಾವಿಸುತ್ತೀರಾ? ಖಂಡಿತ ಅವರು ಕಾಯುವುದಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾರ್ಪೊರೇಟ್ ಜಗತ್ತಿನಲ್ಲಿ ನೈಜ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಕುರಿತು ವಿವರಿಸುವಾಗ ಅವರು ಮೇಲಿನಂತೆ ಅಭಿಪ್ರಾಯ ಪಟ್ಟಿದ್ದಾರೆ.







