ಇಬ್ಬರು ಯುವಕರನ್ನು ಸುಟ್ಟು ಕೊಂದ ಪ್ರಕರಣ: 'ವಿಶೇಷ ಫೋಟೋ' ಹಂಚಿ ಗೆಹ್ಲೋಟ್ ವಿರುದ್ಧ ಉವೈಸಿ ಆಕ್ರೋಶ

ಹೊಸದಿಲ್ಲಿ: ರಾಜಸ್ಥಾನದಲ್ಲಿ ನಡೆದ ಇಬ್ಬರು ಯುವಕರ ಹತ್ಯೆಯ ಬಗ್ಗೆ ಅಸದುದ್ದೀನ್ ಉವೈಸಿ ಸೋಮವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭರತ್‌ಪುರದಲ್ಲಿ ಜುನೈದ್ ಮತ್ತು ನಾಸಿರ್ ಎಂಬ ಇಬ್ಬರು ಯುವಕರನ್ನು ಗೋರಕ್ಷಕರು ಅಪಹರಿಸಿದ್ದಾರೆ ಎನ್ನಲಾಗಿದ್ದು, ನಂತರ ಅವರ ಮೃತದೇಹಗಳು ಸುಟ್ಟ ಸ್ಥಿತಿಯಲ್ಲಿ ಹರಿಯಾಣದಲ್ಲಿ ಪತ್ತೆಯಾಗಿದ್ದವು.
ಘಟನೆಯ ಬಗ್ಗೆ ಸಿಎಂ ಗೆಹ್ಲೋಟ್‌ರನ್ನು ಟೀಕಿಸಿರುವ ಉವೈಸಿ ಟ್ವಿಟರ್ ನಲ್ಲಿ ಖಾಲಿ ಚಿತ್ರ ವನ್ನು ಹಂಚಿಕೊಂಡಿದ್ದು, 'ಅಶೋಕ್ ಗೆಹ್ಲೋಟ್ ಜುನೈದ್ ಮತ್ತು ನಾಸಿರ್ ಕುಟುಂಬವನ್ನು ಭೇಟಿಯಾದ ವಿಶೇಷ ಫೋಟೋ'. ಎಂದು ಬರೆದಿದ್ದಾರೆ.
ಸಂತ್ರಸ್ತರ ಕುಟುಂಬದವರು ನಾಪತ್ತೆ ಬಗ್ಗೆ ನೀಡಿದ ದೂರು ಸ್ವೀಕರಿಸಲು ರಾಜಸ್ಥಾನ ಸರ್ಕಾರವು ವಿಳಂಬ ಮಾಡಿ, ಆರೋಪಿಗಳು ರಾಜ್ಯದಿಂದ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೈದರಾಬಾದ್ ಸಂಸದರೂ ಆಗಿರುವ ಉವೈಸಿ ಆರೋಪಿಸಿದ್ದಾರೆ.
"ಜುನೈದ್ ಮತ್ತು ನಾಸಿರ್‌ಗೆ ಸಂಬಂಧಿಸಿದ ನಾಪತ್ತೆ ದೂರಿನ ಕುರಿತು ರಾಜಸ್ಥಾನ ಸರ್ಕಾರ ತಕ್ಷಣ ಕ್ರಮ ಕೈಗೊಂಡಿದ್ದರೆ, ಅವರು (ಅಪಹರಣಕಾರರು) ರಾಜಸ್ಥಾನದ ಗಡಿಯನ್ನು ದಾಟಲು ಸಾಧ್ಯವಾಗುತ್ತಿರಲಿಲ್ಲ" ಎಂದು ಉವೈಸಿ ಕಳೆದ ವಾರ ಅಲ್ವಾರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.
ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಮಾತನಾಡಿದ್ದಾರೆ. ತನಿಖೆಗೆ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಹರಿಯಾಣ ಸಿಎಂ ಗೆಹ್ಲೋಟ್‌ಗೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
BREAKING: Exclusive photo of @ashokgehlot51 meeting Junaid’s & Nasir’s family pic.twitter.com/oXV5TGWj9X
— Asaduddin Owaisi (@asadowaisi) February 21, 2023







