ಮನುವಾದಿಗಳಿಂದ ಪ್ರಜಾಪ್ರಭುತ್ವದ ಮೂಲತತ್ವ ನೆಲಸಮ: ಸುಂದರ ಮಾಸ್ತರ್

ಕಾಪು: ಪ್ರಜಾಪ್ರಭುತ್ವದ ಮೂಲ ಉದ್ದೇಶ ಮತ್ತು ಮೂಲ ತತ್ವವನ್ನೇ ನೆಲಸಮ ಮಾಡಿ ಅಧಿಕಾರ ನಡೆಸುತ್ತಿರುವ ಮನುವಾದಿ ಶಕ್ತಿಗಳನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಹೇಳಿದ್ದಾರೆ.
ಫೆ.19ರಂದು ನಡೆದ ಕಾಪು ತಾಲೂಕಿನ ಭಂಟಕಲ್ಲು ಗ್ರಾಮ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಯಾವುದೇ ಅಭಿವೃದ್ಧಿ ಮಾಡದೆ ಕೇವಲ ಸರಕಾರಿ ಸಂಸ್ಥೆಗಳನ್ನೆಲ್ಲಾ ಖಾಸಗೀ ಕರಣಗೊಳಿಸುತ್ತ ಪರೋಕ್ಷವಾಗಿ ಮೀಸಲಾತಿಗೆ ಎಳ್ಳು ನೀರು ಬಿಡುವ ಕಾಯಕ ಬಿಜೆಪಿ ಮಾಡುತ್ತಿದೆ. ಆದುದರಿಂದ ಈ ಕೋಮುವಾದಿ ಪ್ರಭುತ್ವವನ್ನು ಈ ದೇಶದ ಮೂಲನಿವಾಸಿಗಳು ಮೂಲೆಗುಂಪು ಮಾಡಬೇಕು ಎಂದರು.
ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಈ ದೇಶದ ಮೂಲನಿವಾಸಿಗಳಾದ ನಮ್ಮನ್ನು ಅಂದು ಮೋಸ ಮಾಡಿ ದೇಶದೊಳಗೆ ನುಗ್ಗಿದ ಪರಕೀಯ ಆರ್ಯರು ಇಂದೂ ಕೂಡ ಮೋಸದಿಂದಲೇ ಅಧಿಕಾರಕ್ಕೆ ಬಂದು ನಮ್ಮನ್ನು ಆಳುತ್ತಿದ್ದಾರೆ. ಅವರು ಸಂವಿಧಾನ ವಿರೋಧಿಗಳು, ಸಂವಿಧಾನವನ್ನು ಬದಲಾಯಿಸುವುದೇ ಅವರ ಗುರಿ. ಯಾವುದೇ ಕಾರಣಕ್ಕೂ ಸಂವಿಧಾನಕ್ಕೆ ಕುಂದು ಬಾರದಂತೆ ನಾವು ರಕ್ಷಣೆಗೆ ನಿಲ್ಲಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಶಂಕರ ಪದಕಣ್ಣಾಯ ಉಧ್ಘಾಟಿಸಿದರು. ಮುಖ್ಯ ಭಾಷಣ ಕಾರರಾದ ರಾಷ್ಟ್ರೀಯ ಆದಿವಾಸಿ ಏಕತಾ ಪರಿಷತ್‌ನ ಜಯಕುಮಾರ್ ಹಾದಿಗೆ ಮಾತನಾಡಿದರು. ಉಮೇಶ ಬಂಟಕಲ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಾಪು ತಾಲೂಕು ಪ್ರಧಾನ ಸಂಚಾಲಕ ವಿಠಲ ಉಚ್ಚಿಲ, ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕ ಎಸ್.ಎಸ್.ಪ್ರಸಾದ್, ಮಹಿಳಾ ಸಂಚಾಲಕಿ ವಸಂತಿ ಶಿವಾನಂದ, ದಲಿತ ನೌಕರರ ಒಕ್ಕೂಟದ ಸಂಚಾಲಕ ರಾಘವೇಂದ್ರ ಬೆಳ್ಳೆ, ವಕೀಲರಾದ ಮಂಜುನಾಥ್ ವಿ., ಶಿರ್ವ ಗ್ರಾಪಂ ಅಧ್ಯಕ್ಷ ರತನ್ ಕುಮಾರ್ ಶೆಟ್ಟಿ, ಶಿರ್ವ ಪೋಲಿಸ್ ಉಪ ನೀರೀಕ್ಷ ರಾಘವೇಂದ್ರ ಸಿ., ಜಿಲ್ಲಾ ಸಂಘಟನಾ ಸಂಚಾಲಕರಾದ ಭಾಸ್ಕರ್ ಮಾಸ್ಟರ್, ಪರಮೇಶ್ವರ ಉಪ್ಪೂರು, ಅಣ್ಣಪ್ಪ ನಕ್ರೆ, ಗೋಪಾಲಕ್ರಷ್ಣ ಕುಂದಾಪುರ, ಉಡುಪಿ ತಾಲೂಕು ಪ್ರಧಾನ ಸಂಚಾಲಕ ಶಂಕರ್ ದಾಸ್ ಚೆಂಡ್ಕಳ ಉಪಸ್ಥಿತರಿದ್ದರು.







