ಮೈಸೂರು: ನಟಿ ರಾಖಿ ಸಾವಂತ್ ಪತಿ ಆದಿಲ್ ದುರಾನಿಗೆ ಪೊಲೀಸ್ ಕಸ್ಟಡಿ

ಮೈಸೂರು,ಫೆ. 22: ಇರಾನಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಮತ್ತು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಅವರ ಪತಿ ಆದಿಲ್ ಖಾನ್ ದುರಾನಿಯನ್ನ ಫೆ. 27 ರವರೆಗೆ ಪೊಲಿಸ್ ಕಸ್ಟಡಿಗೆ ನೀಡಿ ಮೈಸೂರು ಕೋರ್ಟ್ ಆದೇಶಿಸಿದೆ.
ಮೈಸೂರಿನಲ್ಲಿ ವಿದ್ಯಾರ್ಥಿನಿಯಾಗಿದ್ದ ಇರಾನಿ ಯುವತಿಗೆ ವಂಚನೆ ಮಾಡಿದ ಕೇಸ್ ಗೆ ಸಂಬಂಧಿಸಿದಂತೆ ಆದಿಲ್ ಖಾನ್ ದುರಾನಿಯನ್ನ ಮುಂಬೈ ನ್ಯಾಯಾಲಯದಿಂದ ವಶಕ್ಕೆ ಪಡೆದ ಪೊಲೀಸರು ಮೈಸೂರು ಕೋರ್ಟ್‍ಗೆ ಹಾಜರಿಪಡಿಸಿದ್ದರು. ಫೆ. 27 ರವರೆಗೆ ಆದಿಲ್ ಖಾನ್ ದುರಾನಿಯನ್ನ ಪೊಲಿಸ್ ಕಸ್ಟಡಿಗೆ ನೀಡಿದ ಕೋರ್ಟ್ ಸದ್ಯಕ್ಕೆ ವಿಚಾರಣೆ ಫೆಬ್ರವರಿ 27ಕ್ಕೆ ಮುಂದೂಡಿದೆ.
ಇನ್ನು ಮೈಸೂರು ಕೋರ್ಟ್ ಗೆ ರಾಖಿ ಸಾವಂತ್ ಕೂಡ ಹಾಜರಾಗಿದ್ದರು. ನಂತರ ಮಾಧ್ಯಮಗಳ ಮುಂದೆ ಮಾತನಾಡಿ ರಾಖಿ ಸಾವಂತ್, ನಾನು ಕಾನೂನು ಬದ್ಧವಾಗಿ ಮದುವೆಯಾಗಿದ್ದೇನೆ. ನನ್ನಿಂದ ಸುಮಾರು 1.70 ಕೋಟಿ ಹಣ ಪಡೆದು ಹಣವನ್ನೂ ಕೊಡುತ್ತಿಲ್ಲ. ನನ್ನನ್ನ ಅವರ ಮನೆಯವರು ಮನೆಗೂ ಸೇರಿಸುತ್ತಿಲ್ಲ. ನಾನು ಎಲ್ಲಿಗೆ ಹೋಗಲಿ ನನಗೆ ನ್ಯಾಯ ಕೊಡಿಸಿಕೊಡಿ ಎಂದು ಮಾಧ್ಯಮಗಳ ಮುಂದೆ ಕಣ್ಣೀರಾಕಿದರು.
ನನ್ನ ಪತಿಯನ್ನ ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇರಾನಿ ಯುವತಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೈಸೂರು ಪೊಲೀಸರು ಮೈಸೂರಿಗೆ ಕರೆತಂದು ಕೋರ್ಟ್‍ಗೆ ಹಾಜರು ಪಡಿಸಿದ್ದಾರೆ. ಕೋರ್ಟ್ ಅವರಿಗೆ ಏಳು ದಿನ ಪೊಲೀಸ್ ಕಸ್ಟಡಿ ಕೊಟ್ಟಿದೆ. ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ. ನನಗೆ ನ್ಯಾಯ ಬೇಕು, ಆತನಿಗೆ ಜಾಮೀನು ಯಾವುದೇ ಕಾರಣಕ್ಕು ಸಿಗಬಾರದು. ಆತ ಕಾನೂನು ಬದ್ಧವಾಗಿ ಮದುವೆಯಾಗಿದ್ದಾನೆ. ಅದರ ಎಲ್ಲಾ ದಾಖಲಾತಿ ನನ್ನ ಬಳಿ ಇದೆ ಎಂದು ಹೇಳಿದ್ದಾರೆ.
ಮೈಸೂರು ಕೋರ್ಟ್ ಮೇಲೆ ವಿಶ್ವಾಸ ಇದೆ ನನಗೆ ನ್ಯಾಯ ಕೊಡಿಸಿ ಎಂದು ರಾಖಿ ಸಾವಂತ್ ಮನವಿ ಮಾಡಿಕೊಂಡರು.







