ಡಿ.ರೂಪಾ ವಿರುದ್ಧ ರೋಹಿಣಿ ಸಿಂಧೂರಿ ಅರ್ಜಿ: ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಬೆಂಗಳೂರು, ಫೆ.22: ಐಪಿಎಸ್ ಅಧಿಕಾರಿ ಡಿ.ರೂಪಾ ತಮ್ಮ ಬಗ್ಗೆ ಮಾನಹಾನಿ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ನೀಡಲು ಕೋರಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿ ಸಂಬಂಧ ನಗರದ ಸಿಟಿ ಸಿವಿಲ್ ಕೋರ್ಟ್, ಆದೇಶವನ್ನು ಫೆ.23ಕ್ಕೆ ಕಾಯ್ದಿರಿಸಿದೆ.
ಈ ಸಂಬಧ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ 74ನೆ ಸಿಟಿ ಸಿವಿಲ್ ನ್ಯಾಯಪೀಠ, ಆದೇಶವನ್ನು ಕಾಯ್ದಿರಿಸಿದೆ.
ರೋಹಿಣಿ ಪರ ವಾದಿಸಿದ ವಕೀಲರು, ಡಿ.ರೂಪಾ ಅವರು ಸೈಬರ್ ಅಪರಾಧ ವಿಭಾಗದ ಮುಖ್ಯಸ್ಥರಾಗಿದ್ದರು. ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿರುವ ಸಾಧ್ಯತೆಯಿದೆ. ಮೊಬೈಲ್‌ನಲ್ಲಿನ ಮಾಹಿತಿ ಕಾನೂನುಬಾಹಿರವಾಗಿ ಪಡೆದುಕೊಂಡಿದ್ದು, ಡಿ.ರೂಪಾ ಕ್ರಮ ಸಂಪೂರ್ಣ ಕಾನೂನುಬಾಹಿರ ಎಂದು ಪೀಠಕ್ಕೆ ತಿಳಿಸಿದರು.
ಈ ವೇಳೆ ರೂಪಾ ಮೇಲೆ ಸೂಕ್ತ ಪ್ರಾಧಿಕಾರದಲ್ಲಿ ದೂರು ನೀಡಬಹುದಿತ್ತಲ್ಲಾ ಎಂದು ರೋಹಿಣಿ ಸಿಂಧೂರಿ ಪರ ವಕೀಲರಿಗೆ ನ್ಯಾಯಪೀಠವು ಪ್ರಶ್ನಿಸಿತು. ಇದಕ್ಕೆ ರೋಹಿಣಿ ಪರ ವಕೀಲರು ಪ್ರತಿಕ್ರಿಯಿಸಿ, ಸರಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದೇವೆ ಎಂದು ಉತ್ತರಿಸಿದರು.
ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನು ರೂಪಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಅಲ್ಲದೇ, ಅವರ ಖಾಸಗಿ ಮೊಬೈಲ್ ನಂಬರ್ ಅನ್ನೂ ಬಹಿರಂಗಪಡಿಸಿದ್ದಾರೆ. ಇದರಿಂದಾಗಿ ನೂರಾರು ಅಪರಿಚಿತರು ಕರೆ ಮಾಡುತ್ತಿದ್ದಾರೆ. ರೋಹಿಣಿ ಅವರ ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ. ಕಾನೂನಿನ ವ್ಯಾಪ್ತಿಯನ್ನು ಮೀರಿ ರೂಪಾ ಹೇಳಿಕೆ ನೀಡುತ್ತಿದ್ದಾರೆ ಎಂದು ಪೀಠಕ್ಕೆ ಹೇಳಿದರು.
ದೂರು ಸಲ್ಲಿಸಲು ಮುಖ್ಯ ಕಾರ್ಯದರ್ಶಿ ಸೂಕ್ತ ಪ್ರಾಧಿಕಾರವೇ? ಎಂದು ಸಿಂಧೂರಿ ಪರ ವಕೀಲರಿಗೆ ನ್ಯಾಯಪೀಠವು ಮತ್ತೆ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ರೋಹಿಣಿ ಪರ ವಕೀಲರು, ಸಿವಿಲ್ ಸರ್ವೀಸ್ ನಿಯಮಾವಳಿ ಅನುಸಾರ ದೂರು ರೋಹಿಣಿ ಅವರು ನೀಡಿದ್ದಾರೆ. ಸರಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ. ಪೊಲೀಸರಿಗೂ ರೂಪಾ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಡಿ.ರೂಪಾ ಅವರು ಸರಕಾರದ ಸುತ್ತೋಲೆ ಧಿಕ್ಕರಿಸಿ ಹೇಳಿಕೆ ಮುಂದುವರಿಸಿದ್ದಾರೆ. ಹೀಗಾಗಿ, ರೂಪಾರಿಗೆ ನಿರ್ಬಂಧಿಸಲು ಅರ್ಜಿದಾರರ ಪರ ವಕೀಲರು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಫೆ.23ಕ್ಕೆ ಮಧ್ಯಂತರ ಆದೇಶವನ್ನು ಕಾಯ್ದಿರಿಸಿದೆ.







