ಅಡ್ಯನಡ್ಕ | ಸಂಘಪರಿವಾರದಿಂದ ಅಡ್ಡಿ ಪ್ರಕರಣ: ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಮಾನತು ?

ವಿಟ್ಲ: ಅಡ್ಯನಡ್ಕದಲ್ಲಿ ಮುಸ್ಲಿಂ ಸಂಘಟನೆ ಆಯೋಜಿಸಿದ್ದ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ.ಆರ್. ನಾಯ್ಕ್ ರನ್ನು ಶಾಲಾ ಆಡಳಿತ ಸಮಿತಿ ತಾತ್ಕಾಲಿಕವಾಗಿ ಸೇವೆಯಿಂದ ಅಮಾನತುಗೊಳಿಸಿದೆ ಎಂಬ ಆದೇಶ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಶಾಲಾ ಆಡಳಿತ ಮಂಡಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಫೆ.18ರಂದು 10ನೇ ತರಗತಿಯ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಕಾರ್ಯಗಾರಕ್ಕೆ ಕಳುಹಿಸಿದ ಹಿನ್ನೆಲೆಯಲ್ಲಿ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ.ಆರ್. ನಾಯ್ಕ್ ರನ್ನು ತಾತ್ಕಾಲಿಕವಾಗಿ ಸೇವೆಯಿಂದ ಅಮಾನತುಗೊಳಿಸಿ ಅಡ್ಯನಡ್ಕ ಎಜ್ಯುಕೇಶನ್ ನ ಕಾರ್ಯದರ್ಶಿ ಆದೇಶಿಸಿದ್ದಾರೆ ಎಂಬ ಪತ್ರ ವೈರಲ್ ಆಗುತ್ತಿದೆ.
ಶೈಕ್ಷಣಿಕ ಕಾರ್ಯಾಗಾರದಲ್ಲಿ ಧಾರ್ಮಿಕ ಪ್ರವಚನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದರು. ಈ ಬಗ್ಗೆ ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು.
ಶಾಲಾ ಮುಖ್ಯ ಶಿಕ್ಷಕ ಟಿ.ಆರ್. ನಾಯ್ಕ್, ತರಬೇತುದಾರ ಮತ್ತು ಸಂಘಟನೆಯ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ನಡುವೆ ಮುಖ್ಯ ಶಿಕ್ಷಕರ ಸೇವೆಯಿಂದ ತಾತ್ಕಾಲಿಕ ಅಮಾನತು ಎಂಬ ಪತ್ರ ಹರಿದಾಡುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರು ಮುಖ್ಯ ಶಿಕ್ಷರ ಮೇಲೆ ಕ್ರಮ ಜರುಗಿಸಲು ಅಧಿಕಾರ ಶಾಲಾ ಆಡಳಿತ ಮಂಡಳಿಗಿದೆ. ಈ ಘಟನೆ ಬಳಿಕ ಹೆತ್ತರವರ ಸಭೆಯಲ್ಲಿ ನಿರ್ಣಯ ಕೈಗೊಂಡು ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಜರುಗಿಸುವಂತೆ ಇಲಾಖೆಗೆ ವರದಿ ಸಲ್ಲಿಸಲಾಗಿತ್ತು. ಅದರಂತೆ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಜರುಗಿಸುವಂತೆ ಸಂಸ್ಥೆಗೆ ಜ್ಞಾಪನ ಪತ್ರ ನೀಡಲಾಗಿದೆ ಹೊರತು ನಾವು ಈ ಬಗ್ಗೆ ಅಮಾನತು ಮಾಡಿರುವ ಬಗ್ಗೆ ಆದೇಶ ಹೊರಡಿಸಿಲ್ಲ ಎಂದು ಹೇಳಿದ್ದಾರೆ.









